ಮಡಿಕೇರಿ: ಯೋಗ ಎಲ್ಲರ ಮನಸ್ಸನ್ನು ಕೇಂದ್ರೀಕರಿಸುವುದರ ಜತೆಗೆ ನಮ್ಮ ಮನಸ್ಸನ್ನು ಪರಿವರ್ತಿಸುತ್ತದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕರ್ನಾಟಕ ಸರಕಾರ ಕಾರಾಗೃಹ ಮತ್ತು ಸುಧಾರಣಾ ಸೇವೆ ಜಿಲ್ಲಾ ಕಾರಾಗೃಹ ಮಡಿಕೇರಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಮಡಿಕೇರಿ ಇವರುಗಳ ಸಹಯೋಗದೊಂದಿಗೆ ವಸುಧೈವ ಕುಟುಂಬಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಮಡಿಕೇರಿಯ ಕಾರಾಗೃಹದಲ್ಲಿ ಕೈದಿಗಳ ಜತೆ ಆಯೋಜಿಸಿದ್ದ ಯೋಗ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯೋಗ ಪ್ರತಿಯೊಬ್ಬರ ಮನಸ್ಸುನ್ನು ಕೇಂದ್ರಿಕರಿಸುತ್ತದೆ. ಜತೆಗೆ ಮನಸ್ಸನ್ನು ಪರಿವರ್ತಿಸುತ್ತದೆ. ಇದನ್ನು ತಮ್ಮ ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗಬಹುದು ಎಂಬ ಸಂದೇಶವನ್ನು ಕಾರಾಗೃಹ ಕೈದಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ್ ಜಿತ್ತಿ, ಇಲ್ಲಿರುವ ಕೈದಿಗಳು ಯಾವುದೋ ಕಾರಣಕ್ಕಾಗಿ ಅಪರಾಧ ಮಾಡಿ ಕೈದಿಗಳಾಗಿ ಬಂದಿದ್ದೀರಿ. ಆದರೆ, ದಿನ ನಿತ್ಯ ನಿಮ್ಮ ಕೆಲವೊಂದು ಸಮಸ್ಯೆಗಳನ್ನು ನಾವು ಹತ್ತಿರದಿಂದ ನೋಡುತ್ತಿದ್ದು, ಇದಕ್ಕೆಲ್ಲ ಪರಿಹಾರವಾಗಿ ಯೋಗ ಮತ್ತು ಧ್ಯಾನ ಮಾಡುವುದರಿಂದ ನಿಮ್ಮ ಆರೋಗ್ಯ ಮತ್ತು ಮನಸ್ಸು ಎರಡೂ ಶುದ್ಧಿಯಾಗಲಿದೆ. ಬಿಡುಗಡೆಯಾಗಿ ಹೋದ ಸಂದರ್ಭ ನೀವುಗಳೂ ಕೂಡ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ತಮ್ಮನ್ನು ತಾವು ಗುರುತಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಬ್ರಹ್ಮಕುಮಾರಿ ಧನಲಕ್ಷ್ಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗ ಮಾಡುವುದರಿಂದ ನಮ್ಮ ಶಾರೀರಿಕವಾಗಿ ಬಾಹ್ಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬದಹುದು. ನಮ್ಮ ಭಾರತ ದೇಶದಲ್ಲಿ ಅತೀ ಹೆಚ್ಚು ಕಾಲ ಬದುಕಿದ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಶಿವಾನಂದ ಯೋಗಿರವರು, ಬರೋಬರಿ ೧೨೫ ವರ್ಷ ಬದುಕಿದ್ದರು. ಇವರು ಪ್ರತಿದಿನ ತಪ್ಪದೆ ಯೋಗ ಮಾಡುತ್ತಿದ್ದರು. ಧ್ಯಾನವು ನಮ್ಮ ಆಂತರಿಕ ಮನಸ್ಸನ್ನು ಶುದ್ದಿಗೊಳಿಸಿ ನಮ್ಮ ಮನಸ್ಸಿಗೆ ಬರುವ ಕೆಟ್ಟ ಯೋಚನೆಗಳನ್ನು ದೂರ ಮಾಡಿ ಒಳ್ಳೆಯ ಚಿಂತನೆ ಮೂಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ನೀಡಿದರು.
ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಯೋಗ ತರಬೇತುದಾರರಾದ ಪಿ.ಎಚ್.ಅಲೀಮಾ ಮಾತನಾಡಿ, ಯೋಗ ಮಾಡುವುದರಿಂದ ನಮ್ಮ ಆಯಸ್ಸು ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಯೋಗದಿಂದ ಸಹಜವಾಗಿ ಬರುವ ಮಂಡಿನೋವು, ಬೆನ್ನುನೋವು, ಕೈ ಕಾಲುಗಳ ಸ್ನಾಯು ಸೆಳೆತ ಇತ್ಯಾದಿಗಳನ್ನು ಹೋಗಲಾಡಿಸಬಹುದು ಎಂದು ಹೇಳುವುದರೊಂದಿಗೆ ಕೆಲವೊಂದು ಸರಳ ಆಸನಗಳನ್ನು ಕೈದಿಗಳಿಗೆ ಮಾಡಿಸಿದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ವಾರ್ಡರ್ ಮಹಾಂತೇಶ್ ಪರವಗೋಳ್, ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಂ.ಎಂ.ವಸಂತಿ, ಸಹ ಕಾರ್ಯದರ್ಶಿ ಬೊಳ್ಳಜಿರ.ಬಿ.ಅಯ್ಯಪ್ಪ, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಸ್ಥಳೀಯ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷೆ ಎನ್.ವಿ.ನೀಲಮ್ಮ, ಜಿಲ್ಲಾ ಕಾರಾಗೃಹ ಜೈಲರ್ ರವಿ ಮುತ್ತಪ್ಪ ಬಂಡಿವಡ್ಡರ್, ಸಹಾಯಕ ಜೈಲರ್ ಎಚ್.ಟಿ.ಲತಾ, ಬ್ರಹ್ಮಕುಮಾರಿ ಬಿ.ಕೆ.ಹರಿಣಾಕ್ಷಿ ಉಪಸ್ಥಿತರಿದ್ದರು.