ಜಿಲ್ಲೆ

ಸಮಗ್ರ ವಿಕಸನಕ್ಕೆ ಯೋಗ ರಾಜಮಾರ್ಗ: ಡಾ.ರಾಘವೇಂದ್ರ ಪೈ ಸಲಹೆ

ಆರ್.ಕೃಷ್ಣ

ಮೈಸೂರು: ಮನೋದೈಹಿಕ ಸ್ವಾಸ್ಥ್ಯಕ್ಕೆ, ಬೌದ್ಧಿಕ ವಿಕಸನಕ್ಕೆ, ಆಧ್ಯಾತ್ಮಿಕ ಪ್ರಗತಿಗೆ ಯೋಗ ರಾಜಮಾರ್ಗವಾಗಿದೆ ಎಂದು ಖ್ಯಾತ ಯೋಗ ಗುರು, ವಿಜಯವಾಣಿ ಅಂಕಣಕಾರ ಡಾ.ರಾಘವೇಂದ್ರ ಪೈ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದ ಹೋಂ ಮ್ಯಾನೇಜ್‌ಮೆಂಟ್ ವಿಭಾಗದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಸುಖಿ ಜೀವನಕ್ಕಾಗಿ ಗೃಹ ನಿರ್ವಹಣೆ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಯೋಗ ಮತ್ತು ಧ್ಯಾನ’ ಕುರಿತು ಅವರು ಉಪನ್ಯಾಸ ನೀಡಿದರು.
ವ್ಯಕ್ತಿಯ ಸರ್ವಾಂಗೀಣ ವ್ಯಕ್ತಿತ್ವ ವಿಕಾಸವೂ ಯೋಗದಿಂದ ಸಾಧ್ಯ. ಮನಸ್ಸೇ ಮಾನವನ ಯಶಸ್ಸಿಗೆ ಅಥವಾ ಅವನತಿಗೆ ಕಾರಣ. ಇಂತಹ ಶಕ್ತಿಯುತ ಮನಸ್ಸಿನ ನಿಯಂತ್ರಣಕ್ಕೆ ಯೋಗ ರಾಮಬಾಣ. ಯೋಗವು ಮನಸ್ಸಿನ ಅತೀವೇಗ, ಚಂಚಲತೆ, ದುಃಖ, ದೌರ್ಬಲ್ಯ, ಒತ್ತಡ, ಗೊಂದಲ ಮತ್ತು ಚಿಂತೆಯನ್ನು ನಿವಾರಿಸುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ನಮ್ಮ ಆರೋಗ್ಯವನ್ನು ಸುಸ್ಥಿರವಾಗಿಸಿಕೊಳ್ಳಲು ಎಲ್ಲರೂ ಯೋಗದ ಮಹತ್ವವನ್ನು ಅರಿತುಕೊಳ್ಳಬೇಕು. ವೈದ್ಯಕೀಯ ಲೋಕ ಯೋಗ, ವ್ಯಾಯಾಮದ ಮಹತ್ವವನ್ನೇ ಒತ್ತಿ ಹೇಳುತ್ತಿದೆ. ಆದ್ದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯವೂ ಯೋಗ ಮಾಡಿ ಎಂದರು.
ಕಾರ್ಯಕ್ರಮದ ಸಂಚಾಲಕ ಮಾರುತಿ ಪ್ರಸನ್ನ, ಸಮಿತಿಯ ಸದಸ್ಯರಾದ ಸಂಧ್ಯಾ, ನಿಶ್ಚಿತಾ, ಕಾವ್ಯಾ ಇತರರು ಇದ್ದರು.