ಹುಬ್ಬಳ್ಳಿ: ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ ಮಾಧ್ಯಮ ಸಹಯೋಗದಲ್ಲಿ ಹಾರ್ಟ್‌ಫುಲ್‌ನೆಸ್ ಇನ್‌ಸ್ಟಿಟ್ಯೂಟ್, ಶ್ರೀರಾಮಚಂದ್ರ ಮಿಷನ್, ಕೇಂದ್ರ ಸಾಂಸ್ಕೃತಿಕ ಸಚಿವಾಲಯ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮ್‌ಖಾನಾ ಮೈದಾನದಲ್ಲಿ ಆಯೋಜಿಸಿರುವ ‘ಯೋಗ ಮಹೋತ್ಸವ’ ಎರಡನೇ ದಿನ ಶನಿವಾರವೂ ಯೋಗಾಸಕ್ತರನ್ನು ಸೆಳೆಯಿತು. 500 ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ಹಲವು ಆಸಗಳನ್ನು ಮಾಡಿದರು.
ಹಾರ್ಟ್‌ಫುಲ್‌ನೆಸ್ ಕೇಂದ್ರದ ವಲಯ ಸಂಚಾಲಕ ಅಜಿತ್ ಕಾಮತ್ ಅವರು ಶುದ್ಧೀಕರಣ ಧ್ಯಾನವನ್ನು ತಿಳಿಸಿಕೊಟ್ಟರು. ಈ ಧ್ಯಾನದಿಂದ ಜನರ ಮೈಮನ ಹಗುರಾಗುತ್ತದೆ. ಹಂಸ-ಕ್ಷೀರ ನ್ಯಾಯವನ್ನು ತಿಳಿಸಿಕೊಡುತ್ತದೆ.
ಪರಮಾತ್ಮನ ಅನುಸಂಧಾನವನ್ನು ನಿಗದಿಗೊಳಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಈ ಧ್ಯಾನವನ್ನು ಪ್ರತಿ ದಿನವೂ ಮಾಡಬಹುದು ಎಂದು ಸಲಹೆ ನೀಡಿದರು.
ಪತಂಜಲಿ ಯೋಗ ಪೀಠದ ರಾಜ್ಯ ಉಸ್ತುವಾರಿ ಭವರಲಾಲ್ ಆರ್ಯ ಅವರು ಮೊದಲು ಸಿದ್ಧಾಸನ, ಪದ್ಮಾಸನ, ಸಂಕಲ್ಪ ಮಂತ್ರಗಳನ್ನು ತಿಳಿಸಿಕೊಟ್ಟರು. ಬೊಜ್ಜು ನಿವಾರಣೆ ಹಾಗೂ ಮಧುಮೇಹ ನಿಯಂತ್ರಣಕ್ಕೆ ಅಗತ್ಯವಿರುವ ಆಸನಗಳನ್ನು ಪ್ರದರ್ಶನ ಮಾಡಿ, ಯೋಗಾಸಕ್ತರು ಅಭ್ಯಾಸ ಮಾಡಲು ಹೇಳಿದರು.
ಪ್ರತಿಯೊಬ್ಬರೂ ಈ ಆಸನಗಳನ್ನು ಅಳವಡಿಸಿಕೊಂಡರೆ, ನಿಮ್ಮ ಹತ್ತಿರ ಯಾವ ರೋಗವೂ ಸುಳಿಯುವುದಿಲ್ಲ. ಭಾರತವು ವಿಶ್ವದಲ್ಲಿಯೇ ಮಧುಮೇಹದ ರಾಜಧಾನಿ ಆಗುವುದನ್ನು ತಡೆಯಬಹುದು ಎಂದು ಆರ್ಯ ಅವರು ಹೇಳಿದರು.
ಇದಕ್ಕೂ ಮೊದಲು ಬ್ರೈಟರ್ ಮೈಂಡ್ಸ್ ಸಂಸ್ಥೆಯ ಮಕ್ಕಳು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಾಣ್ಯ, ನೋಟು, ಪುಸ್ತಕ ಓದುವುದನ್ನು ಪ್ರದರ್ಶಿಸಿ ನೋಡುಗರನ್ನು ಚಕಿತಗೊಳಿಸಿದರು. ಮಿದುಳಿನ ಬೆಳವಣಿಗೆಗೆ ಪೂರಕವಾಗುವ ಪ್ರಯೋಗಗಳನ್ನು ಮಾಡಿದರು.
ವಿದ್ವಾನ್ ಶ್ರೀಧರ ಜೂಜಾರ ಅವರು ಯಮನ್ ರಾಗದಲ್ಲಿ ಕೊಳಲು ವಾದನ ಪ್ರಸ್ತುತಪಡಿಸಿದರು. ದಯಾನಂದ ತೇರದಾಳ ಸಾಥ್ ನೀಡಿದರು. ಹಾರ್ಟ್‌ಫುಲ್‌ನೆಸ್ ಹುಬ್ಬಳ್ಳಿ ಧ್ಯಾನ ಕೇಂದ್ರದ ಸಂಚಾಲಕ
ಡಾ. ಬಿ.ಆರ್. ಬಾರಕೋಲ್, ಸಚಿನ್ ಮಹಾಜನ್ ಇತರರು ಇದ್ದರು. ಸುನೀತಾ ಕುರ್ತಕೋಟಿ ನಿರೂಪಿಸಿದರು.