ಜಿಲ್ಲೆ

ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್, ಕೇಂದ್ರ ಸಚಿವ ಜೋಶಿ ಆಕ್ರೋಶ

Dharwada - Basavaraj Idli

ಹುಬ್ಬಳ್ಳಿ: ಪ್ರತಿಯೊಬ್ಬರಿಗೂ ೫ ಕೆಜಿಯಂತೆ ದೇಶದ ೮೦ ಕೋಟಿ ಜನರಿಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ. ಆದರೂ, ರಾಜ್ಯ ಕಾಂಗ್ರೆಸ್ ನವರು ಅಕ್ಕಿ ಕೊಡುತ್ತಿಲ್ಲ ಎಂದು ಕೇಂದ್ರದ ಮೇಲೆ ಅನಗತ್ಯ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಜಿಮಖಾನಾ ಮೈದಾನದಲ್ಲಿ ಬುಧವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕದಲ್ಲೂ ಐದು ಕೆಜಿ ಅಕ್ಕಿ ಕೊಡುತ್ತಿದ್ದೇವೆ‌.
ಸಿದ್ದರಾಮಯ್ಯನವರು ಹತ್ತು ಕೆಜಿ ಕೊಡುತ್ತೇನೆ ಎಂದು ವೋಟ್ ತಗೋಬೇಕಾದ್ರೆ ಕೇಂದ್ರದ ಅಕ್ಕಿ ಬಗ್ಗೆ ಸ್ಪಷ್ಟಪಡಿಸಿಲ್ಲ. ಇದೀಗ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ಭಾರತ ಸರ್ಕಾರ ಯಾವುದೇ ರಾಜ್ಯಕ್ಕೂ ಅಕ್ಕಿ ಕೊಡುತ್ತಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು

ಉತ್ತರ ಪ್ರದೇಶ, ಮಧ್ಯ ಪ್ರದೇಶದವರೂ ಅಕ್ಕಿ ಕೇಳಿದ್ದರು. ಯಾರಿಗೂ ಕೊಟ್ಟಿಲ್ಲ.
ಬಫರ್ ಸ್ಟಾಕ್ ಅಷ್ಟೇ ಕೇಂದ್ರದ ಬಳಿ ಇದೆ. ಗ್ಯಾರಂಟಿ ವಿಚಾರದಲ್ಲಿ ನಿತ್ಯ ಒಂದು ಕಂಡೀಷನ್ ಹಾಕುತ್ತಿರುವ ರಾಜ್ಯ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಹರಿಹಾಯ್ದರು.

ಜನರಿಗೆ ಮಾತು ಕೊಟ್ಟಂತೆ ಅಕ್ಕಿ ಕೊಡಬೇಕು. ಕೇವಲ ಮೋದಿ ಅವರನ್ನು ಬೈಯುವುದನ್ನೇ ಕೆಲಸ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಹಿಟ್ಲರ್ ತರಾ ನಡೆದುಕೊಳ್ಳುತ್ತಿದ್ದಾರೆ ಎಂದ ಜೋಶಿ ಅವರು,
ಸರ್ಕಾರದ ವಿರುದ್ದ ಮಾತಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಎನ್ನೋದು ಸರ್ವಾಧಿಕಾರದ ಪ್ರತೀಕ. ಇದೆಲ್ಲ ನಡೆಯುವುದಿಲ್ಲ ಎಂದರು.

ಬಸ್ ಗಳಲ್ಲಿ ಪುರುಷ ಪ್ರಯಾಣಿಕರಿಗೆ ಕುಳಿತುಕೊಳ್ಳೋಕೆ ಜಾಗ‌ ಇಲ್ಲ. ಯೋಜನೆ ಘೋಷಣೆ ಮಾಡಿದ್ದಾರೆ, ಬಸ್ ಇಲ್ಲ.
ಓವರ್ ಲೋಡ್ ನಿಂದ ಅಪಘಾತ ಆಗ್ತಿದೆ.
ಹೊಸ ಬಸ್ ಖರೀದಿ‌ ಮಾಡಿ ಎಂದು ಸಲಹೆ ನೀಡಿದರು.