ಜಿಲ್ಲೆ

ಅಂತರಂಗದ ಶುದ್ಧಿಗೆ ಯೋಗ ಅಗತ್ಯ

ಸೋಮನಾಥ ರೆಡ್ಡಿ

ಮುಂಡರಗಿ: ಯೋಗವು ಆಧ್ಯಾತ್ಮಿಕ ಸಾಧನೆಗೆ ಶಕ್ತಿ ತುಂಬುತ್ತದೆ. ಯೋಗವು ನಮ್ಮ ಆರೋಗ್ಯ ಕಾಪಾಡುವುದರ ಜತೆಗೆ ನಮ್ಮ ಅಂತರಂಗದ ಅರಿವನ್ನು ಜಾಗೃತಗೊಳಿಸುತ್ತದೆ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಧರ್ಮಪ್ರವಚನದಲ್ಲಿ ಮಾತನಾಡಿದ ಅವರು, ‘ವ್ಯಾಯಾಮ ದೇಹವನ್ನು ಗಟ್ಟಿಗೊಳಿಸಿದರೆ ಯೋಗ ಆತ್ಮ, ಮನಸನ್ನು ಗಟ್ಟಿಗೊಳಿಸುತ್ತದೆ.

ಅಷ್ಟಾಂಗ ಯೋಗಗಳಾದ ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾರ, ಧ್ಯಾನ, ಆಧರಣ ಮತ್ತು ಸಮಾಧಿ ಇವುಗಳೆಲ್ಲವನ್ನೂ ಹಂತ ಹಂತವಾಗಿ ಸಾಧಿಸುವವನು ದೈವತ್ವಕ್ಕೆ ಏರುತ್ತಾನೆ’ ಎಂದರು.

ವಿಚಾರ ಮಾಡುವುದು ಬೇರೆ, ಆಚರಿಸುವುದು ಬೇರೆ. ಕಣ್ಮುಂದೆ ನಡೆಯುವುದು ಅರಿಯುವುದು ಬೇರೆ, ಅನುಭವಿಸುವುದು ಬೇರೆ. ನಮ್ಮ ಪಂಚೇಂದ್ರಿಗಳಲ್ಲಿ ಕಣ್ಣು, ಮೂಗು ಶ್ರೇಷ್ಠವಾಗಿದೆ. ಇಷ್ಟಲಿಂಗಾನುಷ್ಟಾನದಲ್ಲಿ ಕಣ್ಣನ್ನು ಲಿಂಗವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಇಷ್ಟ ಲಿಂಗಪೂಜೆ ಮಾಡುವಾಗ ಇಷ್ಟಲಿಂಗದ ಮೇಲೆ ನೇರ ದೃಷ್ಟಿಯನ್ನು ಇಟ್ಟುಕೊಂಡು ಪೂಜಿಸಬೇಕು ಎಂದರು.