ಸೋಮವಾರಪೇಟೆ: ಒತ್ತಡಮುಕ್ತ ಬದುಕು, ಪೌಷ್ಟಿಕ ಆಹಾರ ಸೇವನೆ ಹಾಗೂ ದಿನನಿತ್ಯ ಒಂದಷ್ಟು ಸಮಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಅರುಣ್ ಕುಮಾರ್ ಹೇಳಿದರು.
11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣ ಆಯುಷ್ ಇಲಾಖೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಹಾಗೂ ಪತ್ರಕರ್ತರಿಗೆ ಯೋಗ ತರಬೇತಿ, ಆಯುಷ್ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದದ ಬಗ್ಗೆ ಜನರಿಂದ ಜನರಿಗಾಗಿ ಸಂದೇಶ, ಜನರ ಸಹಭಾಗಿತ್ವ, ಜನ ಆಂದೋಲನ ಎಂಬ ಮೂರು ಉದ್ದೇಶವನ್ನು ಇಟ್ಟುಕೊಂಡು ಆಯುರ್ವೇದ ದಿನ ಆಚರಿಸಲಾಗುತ್ತಿದೆ. ಪಟ್ಟಣದ ಆಯುಷ್ ಇಲಾಖೆಯಲ್ಲಿ ಆಯುರ್ವೇದ, ಹೋಮಿಯೋಪಥಿ ಉಚಿತ ಚಿಕಿತ್ಸಾ ಸೌಲಭ್ಯವಿದ್ದು, ರೋಗಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪಂಚಕರ್ಮ ಚಿಕಿತ್ಸೆಗಳಾದ ವಮನ, ವಿರೇಚನ, ನಸ್ಯ, ಬಸ್ತಿ, ರಕ್ತಮೋಕ್ಷಣ, ಉಪಕಾಮ ಚಿಕಿತ್ಸೆಗಳಾದ ಜಾನು ಬಸ್ತಿ, ಕಟೆ ಬಸ್ತಿ, ಗ್ರೀವ ಬಸ್ತಿ, ಶಿರೋಧಾರ, ಉಪನಾಹ ಸ್ವೇದ, ವಾಲೂಕ ಸ್ವೇದ ಇತ್ಯಾದಿ ಚಿಕಿತ್ಸೆಗಳು ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಹೇಳಿದರು.
ಆಯುರ್ವೇದ ವೈದ್ಯೆ ಕೆ.ಎಸ್.ಶ್ವೇತಾ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಆಯುರ್ವೇದ ಔಷಧ ಸಹಕಾರಿಯಾಗಿದ್ದು, ಭಾರತ ದೇಶಕ್ಕೆ ಆಯುರ್ವೇದದ ಮೂಲಕ ಘನತೆ ಹೆಚ್ಚಾಗಿದೆ. ಪ್ರಪಂಚದಲ್ಲಿ ಎಲ್ಲರೂ ನಮ್ಮ ದೇಶಕ್ಕೆ ಬಂದು ಆಯುರ್ವೇದವನ್ನು ಕುರಿತು ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಿದರು.
ಹೋಮಿಯೋಪಥಿ ವಿಭಾಗದ ವೈದ್ಯೆ ಸೌಪರ್ಣಿಕಾ ಮಾತನಾಡಿ, ಹೋಮಿಯೋಪಥಿ ಒಂದು ಸಮಗ್ರ ವೈದ್ಯಕೀಯ ಪದ್ಧತಿಯಾಗಿದ್ದು, ಇದನ್ನು 18ನೇ ಶತಮಾನದಲ್ಲಿ ಜರ್ಮನ್ ವೈದ್ಯ ಸ್ಯಾಮ್ಯುಯೆಲ್ ಹಾನಿಮನ್ ಅಭಿವೃದ್ಧಿಪಡಿಸಿದರು. ಹೋಮಿಯೋಪಥಿ ಮೂಲಭೂತ ತತ್ವವೆಂದರೆ ದೇಹವು ತನ್ನನ್ನು ತಾನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಮಿಯೋಪಥಿ ಪರಿಹಾರಗಳನ್ನು ಸಸ್ಯಗಳು, ಖನಿಜಗಳು ಮತ್ತು ಪ್ರಾಣಿ ಉತ್ಪನ್ನಗಳಂತಹ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹೋಮಿಯೋಪಥಿ ವೈದ್ಯರು ದೈಹಿಕ ರೋಗಲಕ್ಷಣಗಳನ್ನು ಮಾತ್ರವಲ್ಲದೆ ವ್ಯಕ್ತಿಯ ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಂಡು ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಮಹೇಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಇದ್ದರು. ಪತ್ರಕರ್ತರಿಗೆ ಯೋಗ ತರಬೇತಿ ನೀಡಲಾಯಿತು. ನಂತರ ಆರೋಗ್ಯ ತಪಾಸಣೆ ನಡೆಸಲಾಯಿತು.