ಮೈಸೂರು: ನಗರದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಯೋಗ ಒಲಿಂಪಿಯಾಡ್‌ಗೆ ಚಾಲನೆ ದೊರೆಯಿತು.
‘ನನಗಾಗಿ ಮತ್ತು ಸಮಾಜಕ್ಕಾಗಿ ಯೋಗ’ ಶೀರ್ಷಿಕೆಯಡಿ ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಹಯೋಗದಲ್ಲಿ ಹಮ್ಮಿಕೊಂಡಿರುವ ಯೋಗ ಸ್ಪರ್ಧೆಗೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.
ನಗರದ ಆರ್‌ಐಇ ಆವರಣದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. 18 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಂದ 485 ವಿದ್ಯಾರ್ಥಿಗಳು ಹಾಗೂ 100 ಶಿಕ್ಷಕರು ಪಾಲ್ಗೊಳ್ಳುವ ಮೂಲಕ ಯೋಗ ಜಾತ್ರೆಗೆ ಮೆರುಗು ತುಂಬಿದರು.
ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ರಾಷ್ಟ್ರೀಯ ಯೋಗ ಒಲಿಂಪಿಯಾಡ್ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಮಾತನಾಡಿ, ಯೋಗ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಾಗಿಡುವ ಶಕ್ತಿ ಹೊಂದಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇದು ಸಹಾಯಕವಾಗಿದೆ ಎಂದು ಹೇಳಿದರು.
ಯೋಗವನ್ನು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಸೇರಿಸಲಾಗಿದೆ. ನಮ್ಮ ಗ್ರಂಥಗಳಲ್ಲಿ ಯೋಗದ ಮಹತ್ವವನ್ನೂ ಉಲ್ಲೇಖಿಸಲಾಗಿದೆ. ಅದಕ್ಕಾಗಿಯೇ ಭಾರತವನ್ನು ಯೋಗ ಗುರು ಎಂದು ಪರಿಗಣಿಸಲಾಗಿದೆ ಎಂದರು.
ಯೋಗದಿಂದ ದೈಹಿಕವಾಗಿ ಆರೋಗ್ಯಕರ, ಮಾನಸಿಕವಾಗಿ ಶಾಂತ ಮತ್ತು ಭಾವನಾತ್ಮಕವಾಗಿ ತೃಪ್ತಿ ಹೊಂದುತ್ತೇವೆ. ದೇಹ, ಮನಸ್ಸು ಮತ್ತು ಭಾವನೆ ಸಮತೋಲನಗೊಳಿಸಲು ಯೋಗವು ಉತ್ತಮ ಮಾರ್ಗವಾಗಿದೆ. ಯೋಗ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಸ್ವಾಮಿ ವಿವೇಕಾನಂದರು ಷಿಕಾಗೋದ ಧರ್ಮಗಳ ಸಂಸತ್ತಿನಲ್ಲಿ ಯೋಗದ ವೈಶಿಷ್ಟೃವನ್ನು ಪ್ರಸ್ತಾಪಿಸಿದ್ದರು. ಜತೆಗೆ, ಇಡೀ ಜಗತ್ತಿಗೆ ಯೋಗವನ್ನೂ ಪರಿಚಯಿಸಿದರು ಎಂದು ತಿಳಿಸಿದರು.
ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’. ಯೋಗವು ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಒಳಗೊಂಡು ಮಹಿಳೆಯರನ್ನು ಸಬಲೀಕರಣಗೊಳಿಸುವ ಒಂದು ಸಮಗ್ರ ಸಾಧನವಾಗಿದೆ ಎಂದು ಹೇಳಿದರು.
ಮಕ್ಕಳಲ್ಲಿ ಯೋಗದ ಆಸಕ್ತಿಯನ್ನು ಜಾಗೃತಗೊಳಿಸುವುದು, ಯೋಗದ ಇತಿಹಾಸ ಮತ್ತು ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡುವುದು, ಅವರ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಯೋಗದ ಮಹತ್ವವನ್ನು ವಿವರಿಸುವುದು ರಾಷ್ಟ್ರೀಯ ಯೋಗ ಒಲಿಂಪಿಯಾಡ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಯೋಗ ಒಲಿಂಪಿಯಾಡ್‌ನಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಸಂತಸದ ವಿಷಯ. ಯೋಗದ ಮೂಲಕ ಮಕ್ಕಳಲ್ಲಿ ವಿವಿಧ ಪಂಚಕೋಶ, ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳನ್ನು ಅಭಿವೃದ್ಧಿಪಡಿಸುವುದು ಭಾರತ ಸರ್ಕಾರದ ಗುರಿಯಾಗಿದೆ ಎಂದರು.
ಭಾರತದ ಪುಣ್ಯಭೂಮಿಯಿಂದ ಹುಟ್ಟಿಕೊಂಡ ಯೋಗವು ‘ವಸುಧೈವ ಕುಟುಂಬಕಂ’ ಮತ್ತು ‘ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ’ ಎಂಬ ಚಿಂತನೆಯೊಂದಿಗೆ ಜನರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದೆ. ಇಂದು ಪ್ರಪಂಚಾದ್ಯಂತ ಜನರು ತಮ್ಮ ಜೀವನದಲ್ಲಿ ಯೋಗವನ್ನು ಸೇರಿಸಿಕೊಂಡಿದ್ದಾರೆ. ಜನರ ಸಂತೋಷ, ದೈಹಿಕವಾಗಿ ಸಾಮರ್ಥ್ಯ ಮತ್ತು ದೀರ್ಘಾಯುಷ್ಯದ ಬದುಕಿಗೆ ಯೋಗ ಕಾರಣವಾಗಿದೆ ಎಂದರು.
ಯೋಗ ಮತ್ತು ಪ್ರಾಣಾಯಾಮದ ಧನಾತ್ಮಕ ಪರಿಣಾಮವನ್ನು ಸ್ವಂತ ಅನುಭವಿಸಿದ್ದು, ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಮತ್ತು ಅದರ ಮಹತ್ವವನ್ನು ವಿವರಿಸುವ ಮೂಲಕ ಯೋಗವನ್ನು ಮಾಡಲು ಜನರನ್ನು ಪ್ರೇರೇಪಿಸಬೇಕು ಎಂದು ಕರೆನೀಡಿದರು.
ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಮಾತನಾಡಿ, ಯೋಗ ಯಾವುದೇ ಧರ್ಮ, ಜಾತಿಗೆ ಸೀಮಿತವಲ್ಲ. ಇಡೀ ಮನುಕುಲದ ಶ್ರೇಯೋಭಿವೃದ್ಧಿಗಾಗಿ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯು ನೀಡಿದ ಕೊಡುಗೆಯಾಗಿದೆ. ದೇಸಿ ಜ್ಞಾನ ಪರಂಪರೆಯು ಅಗಾಧವಾಗಿದ್ದು, ಬಾಯಿ ಮಾತಿನಲ್ಲಿ ಪರಂಪರೆಯ ಶ್ರೇಷ್ಠತೆ ಹೇಳದೆ ಯುವಕರು ಪಾಲನೆ ಮಾಡಬೇಕು ಎಂದು ಸಲಹೆ ಹೇಳಿದರು.
ಆರ್‌ಐಇನ ಪ್ರಾಯೋಗಿಕ ಶಾಲೆಯ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಆರ್‌ಐಇ ಪ್ರಾಂಶುಪಾಲ ಪ್ರೊ.ವಿ.ಶ್ರೀಕಾಂತ್, ಯೋಗ ಒಲಿಂಪಿಯಾಡ್ ಸಂಚಾಲಕಿ ಕಲ್ಪನಾ ವೇಣುಗೋಪಾಲ್, ಸಂಯೋಜಕ ಡಾ.ಎಸ್.ನಾಗರಾಜು ಇತರರಿದ್ದರು.