ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 
ಜಿಲ್ಲೆ

ಸದೃಢ ಮನಸ್ಸಿಗೆ ಯೋಗ ಸಹಕಾರಿ

ಮಾದೇಶ್ ತಿ.ನರಸೀಪುರ

ಯಳಂದೂರು: ವಿಶ್ವಕ್ಕೆ ಭಾರತ ಕೊಟ್ಟ ಅತಿ ದೊಡ್ಡ ಕೊಡುಗೆ ಯೋಗ. ನಿರಂತರ ಯೋಗಾಭ್ಯಾಸದಿಂದ ಸದೃಢ ದೇಹ ಮತ್ತು ಮನಸು ನಿರ್ಮಾಣವಾಗಲಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಜಿ.ಮಹದೇವ ಹೇಳಿದರು.

ತಾಲೂಕಿನ ಯರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರಾತನ ಕಾಲದಿಂದಲೂ ಯೋಗ ಭಾರತದ ಅವಿಭಾಜ್ಯ ಅಂಗವಾಗಿದೆ. ಪತಂಜಲಿ ಅವರು ಯೋಗ ಗುರು ಆಗಿದ್ದು, ಋಷಿಮುನಿಗಳ ಹಾದಿಯಾಗಿ ಸಾವಿರಾರು ವರ್ಷಗಳ ಹಿಂದೆ ಯೋಗವು ಭಾರತದಲ್ಲಿ ಹುಟ್ಟಿತು. ಯೋಗವು ದೈಹಿಕ ಹಾಗೂ ಮಾನಸಿಕ ಸ್ವಾಸ್ಥತೆಯನ್ನು ಕಾಪಾಡಿಕೊಳ್ಳುವ ಅತ್ಯಂತ ಸುಲಭ ಮಾರ್ಗವಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಯೋಗ ತುಂಬ ಸಹಕಾರಿಯಾಗಿದೆ. ನಿತ್ಯ ಇದಕ್ಕೆ ಕೆಲ ಗಂಟೆಗಳ ಕಾಲ ಸಮಯವನ್ನು ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು.

ಇಡೀ ವಿಶ್ವದಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಕಲಿಯಲು ವಿದೇಶಗಳಿಂದ ಅನೇಕರು ಭಾರತಕ್ಕೆ ಬರುತ್ತಿದ್ದಾರೆ. ಹಾಗಾಗಿ ನಮ್ಮಲ್ಲೇ ಇದರ ಬಗ್ಗೆ ಇನ್ನೂ ಕೆಲವೆಡೆ ಅರಿವಿನ ಕೊರತೆಯಿದ್ದು, ಸುಲಭವಾಗಿ ಆರೋಗ್ಯವನ್ನು ಪಡೆದುಕೊಳ್ಳುವ ಈ ವಿಧಾನವನ್ನು ಎಲ್ಲರಿಗೂ ಪ್ರಚುರಪಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಬಳಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳು ಅರ್ಧ ತಾಸು ಸಾಮೂಹಿಕ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಮಾಡುವ ಮೂಲಕ ಯೋಗಾಭ್ಯಾಸ ಮಾಡಿದರು. ಮುಖ್ಯ ಶಿಕ್ಷಕಿ ಯಶೋದಾ, ಉಮೇಶ್, ನಿರ್ಮಲಾ, ರಾಣಿ, ಸುಮಾ ನಾಗೇಂದ್ರ, ಸುರೇಶ್, ಮಂಜುಳಾ, ಮಮತಾ ಇತರರು ಇದ್ದರು.

ದೇಶದಲ್ಲಿ ಹುಟ್ಟು ಪಡೆದ ಯೋಗ ಪ್ರಸ್ತುತ ಪ್ರಪಂಚಕ್ಕೆ ಸ್ಫೂರ್ತಿಯಾಗಿದೆ. ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಯೋಗ ಅತ್ಯಂತ ಸಹಕಾರಿಯಾಗಿದೆ. ವಿಜಯವಾಣಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಖುಷಿಯಾಗಿದೆ. ಜಿ.ಮಹದೇವ ದೈಹಿಕ ಶಿಕ್ಷಣ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯರಿಯೂರು, ಯಳಂದೂರು