ಮಂಡ್ಯ: ಜಿಲ್ಲಾದ್ಯಂತ ವಿಶ್ವ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಹಲವೆಡೆ ಯೋಗಾಸನಗಳ ಪ್ರದರ್ಶನ ಆಯೋಜಿಸಲಾಗಿತ್ತು.
ನಗರದ ಗಾಂಧಿಭವನದಲ್ಲಿ ಮಹಾತ್ಮ ಯೋಗ ಕೇಂದ್ರ, ಗಾಂಧಿಭವನದ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯ ಮಹಿಳೆ ಭಾಗ್ಯಮ್ಮ ಉತ್ತಮ ಯೋಗಾಸನವನ್ನು ಪ್ರದರ್ಶಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಕೂಡ ಯೋಗಭ್ಯಾಸವನ್ನು ಕಲಿತು ನಿಮ್ಮೊಂದಿಗೆ ಪಾಲ್ಗೊಳ್ಳುತ್ತೇನೆ. ನಮ್ಮ ತಂದೆಯವರ ಕಾಲದಿಂದಲೂ ಉಚಿತವಾಗಿ ಯೋಗ ಅಭ್ಯಾಸ ನಡೆಯುತ್ತಿದೆ. ನಾನು ಕೂಡ ಮುಂದುವರಿಸಿಕೊಂಡು ಬರುತ್ತಿದ್ದೇನೆ. ಯೋಗಭ್ಯಾಸ ಮಾಡಲು ಪ್ರತ್ಯೇಕ ಭವನ ನಿರ್ಮಾಣಗೊಳ್ಳುತ್ತಿದೆ. ಅದರ ಸದ್ಬಳಕೆಯನ್ನು ಮಾಡಿಕೊಳ್ಳಿ ಎಂದರು
ಪತ್ರಕರ್ತರ ಶ್ರೀಪಾದು ಮಾತನಾಡಿ, ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಯೋಗಭ್ಯಾಸ ಮಾಡಿದ್ದಲ್ಲಿ ರೋಗದಿಂದ ದೂರವಿರಬಹುದು. ನಗರದಲ್ಲಿ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಜನರ ಸೋಮಾರಿತನದಿಂದ ಮನೆಯ ಆಹಾರ ತಯಾರಿಸದೆ ಬೀದಿ ಬದಿಯ ಆಹಾರ ಸೇವನೆಯಿಂದ ಹಲವು ರೋಗಕ್ಕೆ ತುತ್ತಾಗುತ್ತಿದ್ದಾರೆ. ಇನ್ನಾದರೂ ಎಚ್ಚರಗೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯೋಗ ಗುರು ಬಾಲಕೃಷ್ಣ ತಂತ್ರಿ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಶ್ರೀನಿವಾಸ್ ಶೆಟ್ಟಿ, ಚಂದ್ರಶೇಖರ್ ಇತರರಿದ್ದರು.