ಜಿಲ್ಲೆ

ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಜೂ.21ರಂದು ಬೆಳಗ್ಗೆ 6 ಗಂಟೆಯಿಂದ 8ರವರೆಗೆ ನಗರದ ಪಿ.ಇ.ಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಿ ಯಾವುದೇ ಅಡಚಣೆ ಆಗದಂತೆ ಯೋಗಾಭ್ಯಾಸಲ್ಲಿ ಪಾಲ್ಗೊಳ್ಳಬೇಕು ಎಂದರು.

ಮಿಮ್ಸ್ ವತಿಯಿಂದ ಯೋಗ ದಿನಾಚರಣೆಯ ದಿನದಂದು ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಯೋಗ ಮಾಡಿ ಬಂದಂತಹ ಯೋಗಪಟುಗಳು ಹಾಗೂ ರಕ್ತದಾನ ಮಾಡಲು ಆಸಕ್ತಿ ಇರುವವರು ರಕ್ತದಾನ ಮಾಡಬಹುದು. ಇದಲ್ಲದೆ ಆಯುಷ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಯೋಗ ದಿನಾಚರಣೆಯ ಅಂಗವಾಗಿ ಹಲವು ಬಗೆಯ ಅಂದರೆ ಕರಿಬೇವಿನ ಗಿಡ, ನೆಲ್ಲಿ, ಸೀಬೆ, ಪರಂಗಿ, ನಿಂಬೆ ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ರಕ್ತದಾನ ಮಾಡಿ ಬಂದಂತಹ ರಕ್ತದಾನಿಗಳಿಗೆ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಆಯುಷ್ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಡಿ.ವೈ.ಎಸ್.ಪಿ.ಡಿ.ಆರ್ ರಾಚಯ್ಯ, ಡಿಡಿಪಿಐ ಎಚ್.ಶಿವರಾಮೇಗೌಡ, ಜಿಲ್ಲಾ ಸಮಾಜ ಇಲಾಖೆ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್, ಡಿಡಿಪಿಯು ಸಿ.ಚೆಲುವಯ್ಯ, ಸ್ಕೌಟ್ಸ್ ಆ್ಯಂಡ್ ಗೈಡ್‌ನ ಭಕ್ತವತ್ಸಲ, ಯೋಗ ಶಿಕ್ಷಕರಾದ ಶಂಕರನಾರಾಯಣಶಾಸ್ತ್ರಿ, ರವಿ, ಎಚ್.ವಿ.ಶಿವರುದ್ರಸ್ವಾಮಿ ಇತರರಿದ್ದರು.