ಮಂಡ್ಯ: ನಿರಂತರ ಯೋಗಾಭ್ಯಾಸ ಮಾಡುವುದು ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಕಾರಿ ಎಂದು ಎಕ್ಸಲ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಟಿ.ಎಚ್.ಪ್ರಜ್ವಲ್‌ಕುಮಾರ್ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ (ಸ್ನಾತಕ) ಮತ್ತು ದೈಹಿಕ ಶಿಕಣ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಆಧುನಿಕ ಸಮಾಜಕ್ಕೆ ಯೋಗದ ಮಹತ್ವ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲ ಆಧುನಿಕತೆಯ ಹೆಸರಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುವುದರಿಂದ ಬದುಕು ಯಾಂತ್ರಿಕವಾಗಿದೆ. ಮಾತ್ರವಲ್ಲದೆ ಒತ್ತಡ ನಡುವೆ ಜೀವನ ನಡೆಸುವಂತಾಗಿದೆ. ಜೀವನಕ್ಕೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಆರೋಗ್ಯ, ನೆಮ್ಮದಿ ಮುಖ್ಯ. ಆದರೆ ಆಧುನಿಕ ಜೀವನ ಶೈಲಿ ಜನರನ್ನು ಬೇಗ ಒತ್ತಡಕ್ಕೆ ತಳುತ್ತಿದೆ. ಇಂದು ಧಾವಂತದ ಬದುಕಿನಿಂದ ಜನರ ಮನಸ್ಥಿತಿ ಕುಂಠಿತವಾಗಿದೆ. ಪರಿಣಾಮ ಕಾಯಿಲೆಗಳಿಂದ ಬಳಲುವಂತಾಗಿದೆ. ಆದ್ದರಿಂದ ಅದರ ನಿವಾರಣೆಗೆ ಯೋಗಾಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಭಾರ ಪ್ರಾಂಶುಪಾಲ ಪದ್ಮನಾಭನ್ ಮಾತನಾಡಿ, ಮನುಷ್ಯ ತನ್ನ ಅಂಗಾಂಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ಯೋಗ ಮಾಡುತ್ತದೆ. ಪಂಚೇಂದ್ರಿಯಗಳು ನಮ್ಮ ಹಿಡಿತದಲ್ಲಿದ್ದರೆ ಏನು ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಟ ಐದು ಮಿಮಿಷ ಧ್ಯಾನ ಮಾಡುವುದನ್ನು ರೂಢಿಸಿಕೊಂಡರೆ ಗುರಿ ಸಾಧಿಸಲು ಅನುಕೂಲವಾಗುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಕೆಂಪಮ್ಮ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಎಸ್.ಶಿವರಾಜು, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕೆ.ಆರ್.ಲೋಕೇಶ್ ಇದ್ದರು. ಇದೇ ವೇಳೆ ವಿದ್ಯಾರ್ಥಿನಿಯರು ಯೋಗಾಭ್ಯಾಸ ಮಾಡಿದರು.