ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸ್ಪರ್ಶ ನರ್ಸಿಂಗ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಆಡಳಿತಾಧಿಕಾರಿಗಳಾದ ರಂಗನಾಥ. ಎಂ. ವಿ ಹಾಗೂ ಶ್ರೀಮತಿ ಶಕುಂತಲಾ ಪಾಟೀಲ ನರ್ಸಿಂಗ್ ಕಾಲೇಜಿನ ಸಂಸ್ಥಾಪಕರಾದ ಶ್ರೀ ವಿಶ್ವನಾಥ ಪಾಟೀಲ ರವರು ಅಂತರಾಷ್ಟ್ರೀಯ ಯೋಗಾ ದಿನಾಚರಣೆಯ ಜಾಗೃತಿ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿದರು.
ರಂಗನಾಥ ಎಂ. ವಿ. ರವರು ಮಾತನಾಡಿ ಯೋಗ ಮಾಡಿ ನಿರೋಗಿಯಾಗಿ, ಯೋಗ ಒಂದು ಉತ್ತಮ ಹಾಗೂ ಸುಲಭವಾಗಿ ನಮ್ಮ ದೈಹಿಕ ಹಾಗೂ ಮಾನಸಿಕ ಸಮತೋಲನ ಸೇರಿದಂತೆ ಆರೋಗ್ಯವನ್ನು ನೀಡುವ ಸಾಧನವಾಗಿದೆ. ಯೋಗ ಒಂದು ಸರಳ ಹಾಗೂ ಆರ್ಥಿಕ ಹೊರೆ ಇಲ್ಲದೆ ನಾವು ಪೂರ್ಣ ಆರೋಗ್ಯ ಪಡೆಯುವ ವಿಧಾನವಾಗಿದ್ದು, ಇದರ ಮಹತ್ವವನ್ನು ಸಾರ್ವಜನಿಕರಿಗೆ ಜಾಥಾ ಅಭಿಯಾನದ ಮೂಲಕ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ. ಯೋಗವನ್ನು ಪ್ರತಿದಿನ ಕ್ರಮಬದ್ಧವಾಗಿ ಮಾಡಿದರೆ ರೋಗದಿಂದ ದೂರವಿರಬಹುದು ಇವಾಗ ನಮ್ಮ ಭಾರತೀಯ ಸಂಸ್ಕೃತಿಯ ಹೆಮ್ಮೆಯಾಗಿದೆ. ನಮ್ಮ ಪೂರ್ವಜರು ಪ್ರಾಚೀನ ಕಾಲದಲ್ಲೇ ಆರೋಗ್ಯದ ಕುರಿತು ಕಾಳಜಿಯನ್ನು ಹೊಂದಿದ್ದರು ಇಂದು ಇಡೀ ಜಗತ್ತೇ ಯೋಗದ ಕಡೆ ಗಮನ ಹರಿಸಿದೆ ವಿದ್ಯಾರ್ಥಿಗಳಾದ ನೀವು ಈಗಿನಿಂದಲೇ ಪ್ರತಿದಿನ ಯೋಗವನ್ನು ಮಾಡಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶ್ರೀ ವಿಶ್ವನಾಥ ಪಾಟೀಲ ರವರು ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಪ್ರತಿದಿನ ಯೋಗ ಮಾಡುವುದರಿಂದ ಸದೃಢ ಆರೋಗ್ಯ ಹಾಗೂ ಸದೃಢ ಮನಸ್ಸನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಏಕಾಗ್ರತೆ, ಚೈತನ್ಯ, ಉಲ್ಲಾಸ, ಉತ್ಸಾಹ ಹಾಗೂ ಮೈಕಾಂತಿ ಪಡೆಯುವುದಲ್ಲದೆ ಜೊತೆಗೆ ಯೋಗ ಮಾಡುವುದರಿಂದ ಡಯಾಬಿಟಿಸ್, ಸಕ್ಕರೆ ಕಾಯಿಲೆ, ರಕ್ತದೊತ್ತಡ ಮುಂತಾದ ರೋಗಗಳಿಂದ ದೂರ ಇರಲು ಸಾಧ್ಯವಿದೆ ಎಂದರು.
ಅಂತರಾಷ್ಟ್ರೀಯ ಯೋಗಾ ಜಾಗೃತಿ ಜಾಥಾ ಅಭಿಯಾನವು ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಸ್ಪರ್ಶ ನರ್ಸಿಂಗ್ ಕಾಲೇಜಿನಿಂದ ಜಾಥಾ ಪ್ರಾರಂಭವಾಗಿ ಕೆ. ಸಿ. ರಾಣಿ ರಸ್ತೆ, ಶ್ರೀ ಜಗದ್ಗುರು ತೋಂಟದಾರ್ಯ ಮಠ, ಕೃಷ್ಣ ಟಾಕೀಸ್ ರಸ್ತೆ, ಹಳೆ ಬಸ್ ನಿಲ್ದಾಣ, ಶ್ರೀ ಕೆ. ಎಚ್. ಪಾಟೀಲ ವೃತ್ತ, ಭೂಮರೆಡ್ಡಿ ಸರ್ಕಲ್ ಹಾಗೂ ಟ್ಯಾಗೂರ್ ರಸ್ತೆಯ ಮೂಲಕ ಪುನಃ ಕಾಲೇಜಿನ ಆವರಣದವರೆಗೆ ವಿದ್ಯಾರ್ಥಿಗಳು ಬ್ಯಾನರ್ ಹಿಡಿದು ಯೋಗದ ಮಹತ್ವ ತಿಳಿಸುವ ಘೋಷ ವಾಕ್ಯಗಳೊಂದಿಗೆ ಜಾಥಾ ಕಾರ್ಯಕ್ರಮವು ನೆರವೇರಿತು.
ಈ ಜಾಥಾ ಕಾರ್ಯಕ್ರಮದಲ್ಲಿ ಕಾಲೇಜಿನ ಸಮಸ್ತ ಉಪನ್ಯಾಸಕ ಬಳಗದವರು, ಸಿಬ್ಬಂದಿ ವರ್ಗದವರು, ಆರಕ್ಷಕ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.