ಜಿಲ್ಲೆ

ಸುವರ್ಣ ವಿಧಾನಸೌಧ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ

ಬೆಳಗಾವಿ : ವಸುದೈವ ಕುಟುಂಬಕಂ ಘೋಷವಾಕ್ಯದೊಂದಿಗೆ ನಡೆದ ಅಂತರರಾಷ್ಟ್ರೀಯ ಒಂಭತ್ತನೇ ಯೋಗ ದಿನಾಚರಣೆ ಅಂಗವಾಗಿ ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದ ಭವ್ಯ ಮೆಟ್ಟಿಲುಗಳ ಎದರು ಬುಧವಾರ ಸಾವಿರಾರು ಜನರಿಂದ ಯೋಗ ಪ್ರದರ್ಶನ ನಡೆಯಿತು.

ಬೆಳಗಿನ ಜಾವದಿಂದಲೇ ಸುವರ್ಣ ವಿಧಾನಸೌಧದ ಆವರಣದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಯೋಗಪಟುಗಳು ಹಾಗೂ ಗಣ್ಯರು ಸುಮಾರು 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಯೋಗದ ಮಹತ್ವವನ್ನು ಸಾರಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಹಾಗೂ ಜಿಲ್ಲಾ ಆಯುಷ್ ಇಲಾಖೆ, ಮಹಾಋಷಿ ಯೋಗ ಹೆಲ್ತ್ ಫೌಂಡೇಷನ್ ಮತ್ತು ವಿವಿಧ ಯೋಗಸಂಸ್ಥೆಗಳ ಸಹಯೋಗದಲ್ಲಿ ಬುಧವಾರ 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ  ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಎದರು ಏರ್ಪಡಿಸಲಾಗಿದ್ದ ಸಾಮೂಹಿಕ ಯೋಗಾಸನ ಕಾರ್ಯಕ್ರಮಕ್ಕೆ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಚಾಲನೆ ನೀಡಿದರು.

ಧ್ಯಾನಕ್ಕೆ ಪೂರಕವಾಗಿರುವ ತಾಡಾಸನ; ಮನಸ್ಸು ಶಾಂತವಾಗಿಟ್ಟುಕೊಳ್ಳುವ ವೃಕ್ಷಾಸನ, ಪಾದ ಹಸ್ತಾಸನ; ಅರ್ಧಚಕ್ರಾಸನ; ದಂಡಾಸನ, ಭದ್ರಾಸನ, ವಜ್ರಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಶವಾಸನ, ಪ್ರಾಣಯಾಮ ಸೇರಿದಂತೆ ವಿವಿಧ ಆಸನಗಳನ್ನು ಸಾವಿರಾರು ಜನರು ಪ್ರದರ್ಶಿಸಿದರು. ಇಂದಿರಾ ಜೋಶಿ ಹಾಗೂ ತಂಡ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಯೋಗ ಸ್ಪರ್ಧೆಯಲ್ಲಿ 40 ಮೆಡಲ್, 30 ಟ್ರೋಫಿಗಳನ್ನು ಗಳಿಸಿರುವ ಜೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿ ಸತ್ಯಂ ಕಾಮ್ರೇಕರ್ ಮತ್ತು ಶಿಕ್ಷಕಿ ಪಲ್ಲವಿ ನಾಡಕರ್ಣಿ ನೇತೃತ್ವದಲ್ಲಿ   ಜೈನ್ ಹೆರಿಟೇಜ್ ಶಾಲೆಯ ಮಕ್ಕಳು ಕೂಡ ಯೋಗ ಪ್ರದರ್ಶನ ನೀಡಿದರು.ರಾಷ್ಟ್ರಮಟ್ಟದ ಯೋಗ ಕಾರ್ಯಕ್ರಮಗಳನ್ನು ನೀಡಿರುವ ಲವ್ ಡೇಲ್ ಶಾಲೆಯ ನೀರಜ್ ಹಾಗೂ ನಕ್ಷತ್ರ ಅವರು ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆದರು. ಎಸ್.ಬಿ.ಜಿ. ಆಯುಋವೇದಿಕ್ ಮಹಾವಿದ್ಯಾಲಯದ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ವಿವಿಧ ಬಗೆಯ ಆಸನಗಳನ್ನು ಪ್ರದರ್ಶಿಸಿತು. ಇದೇ ಸಂದರ್ಭದಲ್ಲಿ ಯೋಗಾಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲಾ-ಕಾಲೇಜುಗಳ ಮಕ್ಕಳಿಗೆ  ಪ್ರಮಾಣಪತ್ರ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್.ಸೊಬರದ, ಜಿಪಂ ಯೋಜನಾಧಿಕಾರಿ ರವಿ ಬಂಗಾರೆಪ್ಪನವರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ, ತಹಶಿಲ್ದಾರ ಸಿದ್ದರಾಜ್ ಭೋಸಗಿ ಸೇರಿದಂತೆ ಮತ್ತಿತರರು ಇದ್ದರು.