ಮೈಸೂರು: ನಾಡಿನ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ವತಿಯಿಂದ ನಟರಾಜ ಪ್ರತಿಷ್ಠಾನ ಹಾಗೂ ಬಸವಮಾರ್ಗ ಫೌಂಡೇಷನ್ ಸಹಯೋಗ ದೊಂದಿಗೆ ನಗರದ ನಟರಾಜ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಜಯವಾಣಿ ಬಳಗ ಹಾಗೂ ನಟರಾಜ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ನೀಡಿದರು. ಯೋಗ ಶಿಕ್ಷಕ ಕುವಲಾಶ್ವ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ನಡೆಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳಾದ ಹರ್ಷಿತಾ, ವೇದಿಕಾಮಾನ್ಯ ಶಿವಂ ಮತ್ತು ವೈಷ್ಣವಿ ಆಕರ್ಷಕ ಯೋಗ ನೃತ್ಯ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಈ ಸಂದರ್ಭ ಯೋಗ ಸಾಧಕರಾದ ಮುಕುಂದ್, ಅನಂತು, ಯೋಗ ಪ್ರಕಾಶ್, ದೇವಿಕಾ, ಕುಮುದಾ ಹಾಗೂ ವೇದಿಕಾಮಾನ್ಯ ಶಿವಂ ಅವರನ್ನು ಸನ್ಮಾನಿಸ ಲಾಯಿತು.
ಕಾರ್ಯಕ್ರಮದಲ್ಲಿ ಭಾರತೀ ಯೋಗಧಾಮ ಸಂಸ್ಥಾಪಕ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್, ಅಪಾರವಾದ ನೆಮ್ಮದಿ ನೀಡುವುದೇ ಯೋಗದ ಪರಮ ಗುರಿ. ಈ ಭೌತಿಕ ಜೀವನದಲ್ಲಿ ಪ್ರತಿಯೊಬ್ಬರು ನೆಮ್ಮದಿ ಕಳೆದುಕೊಂಡಿದ್ದಾರೆ. ಯೋಗವನ್ನು ಪ್ರತಿಯೊಬ್ಬರು ಅನುಸರಿಸಿದರೆ ಬದುಕಿನಲ್ಲಿ ನೆಮ್ಮದಿ ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ಯೋಗದಿಂದ ದೊರೆಯುವ ನೆಮ್ಮದಿ ಕೆಲವೇ ಜನರಿಗೆ ಸೀಮಿತವಾಗಬಾರದು ಪ್ರತಿಯೊಬ್ಬರಿಗೂ ದೊರೆಯಬೇಕು ಎಂಬ ಉದ್ದೇಶ ದಿಂದ ಇದೀಗ ವಿಶ್ವದ ಎಲ್ಲೆಡೆ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯಾವ ವಿದ್ಯೆ ಮಾನವನನ್ನು ಮಾನವನನ್ನಾಗಿ ಮಾಡಬಲ್ಲದೋ ಅಂತಹ ಅಪೂರ್ವವಾದ ಸೃಷ್ಟಿ ಸಹಜವಾದ ಯೋಗ ವಿದ್ಯೆಯನ್ನು ವಿಶ್ವಕ್ಕೆ ವಿಸ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಭಗವಂತ, ದೇವರು ಎಂಬ ಶಬ್ದಗಳು ಗೊಡ್ಡು ಅನ್ನುವ ಮನಸ್ಥಿತಿ ನಿರ್ಮಾಣವಾಗಿರುವ ಕಾಲಘಟ್ಟದಲ್ಲಿ ಯೋಗ ಮತ್ತೆ ಅದೆಲ್ಲವನ್ನೂ ಜೀವನ ಪಥಕ್ಕೆ ತಂದು ನಿಲ್ಲಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಮೆರಿಕದ ಜೀವನ ಕ್ರಮದ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿದ್ದೇನೆ. ಅಲ್ಲಿ ಬೇಕಾದಷ್ಟು ಸಂಪತ್ತು ಇದೆ. ಆದರೆ, ಆ ದೇಶದಲ್ಲಿ ಬಹುತೇಕರಿಗೆ ನೆಮ್ಮದಿ ಇಲ್ಲ. ಅಮೆರಿಕದವರು ನೆಮ್ಮದಿ ಅರಸಿ ಭಾರತಕ್ಕೆ ಬರುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಭಾರತ ಸಮಗ್ರ ಭೂಮಂಡಲದ ಜನತೆಗೆ ನೆಮ್ಮದಿಯ ಹಾದಿಯನ್ನು ಯೋಗದ ಮೂಲಕ ತೋರಿಸಿಕೊಟ್ಟಿದೆ ಎಂದು ಹೇಳಿದರು.
ಯೋಗ ಅಂದರೆ ಕೇವಲ ಆಸನ ಹಾಗೂ ಧ್ಯಾನ ಮಾತ್ರವಲ್ಲ. ಯೋಗವು ಜನರಲ್ಲಿ ಉತ್ತಮ ಆದರ್ಶ ಗುಣಗಳನ್ನು ಬೆಳೆಸಿ ಆದರ್ಶ ಸಮಾಜ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆದರೆ ಕುಟುಂಬ ಹಾಗೂ ಸಮಾಜ, ರಾಷ್ಟ್ರ ಹಾಗೂ ಭೂ ಮಂಡಲದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಬಸವಣ್ಣ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗಾಭ್ಯಾಸದಲ್ಲಿ ತೊಡಗಿದರೆ ಯೋಗವು ನಿಮ್ಮನ್ನು ಉತ್ತುಂಗಕ್ಕೆ ಕರೆದೊಯ್ಯುತ್ತದೆ. ಯೋಗದಿಂದ ಉತ್ತಮ ಆರೋಗ್ಯಕರ ಮನಸ್ಸು ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜೀವನದಲ್ಲಿ ಯಶಸ್ಸು ಗಳಿಸಲು ಶಿಸ್ತು ಅಳವಡಿಸಿಕೊಳ್ಳಬೇಕು. ಇದರ ಜತೆಗೆ ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು. ಶಿಸ್ತು ಹಾಗೂ ನಮ್ಮನ್ನು ನಾವು ಪ್ರೀತಿಸುವ ಗುಣ ಬೆಳೆಸಿಕೊಂಡರೆ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸು ಗಳಿಸುವುದು ನಿಶ್ಚಿತ. ನಮ್ಮನ್ನು ಪ್ರೀತಿಸುವ ಜತೆಗೆ ಸಮಾಜವನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯೋಗಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಯೋಗ ಅಂದರೆ ಸಂಸ್ಕೃತಿ, ಸಂಪತ್ತು, ಅಧಿಕಾರ, ಯಶಸ್ಸು. ಯೋಗದಲ್ಲಿ ಸರ್ವಸ್ವವೂ ಅಡಗಿದೆ. ಯೋಗವನ್ನು ಅರ್ಥ ಮಾಡಿಕೊಂಡವರಿಗೆ ಆ ಸಂಪತ್ತು, ಸಿರಿ ದೊರೆಯುತ್ತದೆ ಎಂದು ಹೇಳಿದರು.
ಕಲೆ, ಸಾಹಿತ್ಯ, ಸಂಸ್ಕೃತಿ, ಯೋಗ ಸೇರಿದಂತೆ ಪ್ರತಿಯೊಂದು ಉತ್ತಮ ಕಾರ್ಯಕ್ರಮಗಳಿಗೆ ಶ್ರೀ ಹೊಸಮಠ ಮತ್ತು ನಟರಾಜ ಪ್ರತಿಷ್ಠಾನ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಯೋಗ ಚಟುವಟಿಕೆಯ ಕಡೆಗೆ ‘ವಿಜಯವಾಣಿ’ ದೈನಿಕ ಆಸಕ್ತಿ ತೋರುತ್ತಿರುವುದು ಸಂತಸದ ವಿಚಾರ. ಕಳೆದ ವರ್ಷ ಸಹ ಇದೇ ವೇದಿಕೆಯಲ್ಲಿ ವಿಜಯವಾಣಿ ಹಾಗೂ ಶ್ರೀ ಹೊಸಮಠ ವತಿಯಿಂದ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು ಎಂದು ಸ್ಮರಿಸಿದರು.
ವಿಜಯವಾಣಿ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಮಾತನಾಡಿ, ಭಾರತೀಯ ನೆಲಮೂಲದ ಸಂಸ್ಕೃತಿಯಾಗಿರುವ ಯೋಗವು ಇಂದು ವಿಶ್ವದ ಉತ್ಸವವಾಗಿ ಆಚರಿಸಲಾಗುತ್ತಿದೆ. ಯೋಗವು ವಿಶ್ವಕ್ಕೆ ಭಾರತದ ಬಹುದೊಡ್ಡ ಕೊಡುಗೆಯಾಗಿದ್ದು, ಯೋಗ ಇದೀಗ ಮನೆ ಮಾತಾಗಿದೆ. ವಿಶ್ವದ ಎಲ್ಲೆಡೆ ಜನರು ಯೋಗ ದಿನ ಆಚರಿಸುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಶ್ರೀ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ನಟರಾಜ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಸೌಮ್ಯ ಬಿ. ನಾಯಕ್ ಇದ್ದರು.