ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಯುವಕನೋರ್ವ ವಿಯೇಟ್ನಾಂ ದೇಶದಲ್ಲಿ ಕಳೆದೊಂದು ದಶಕದಿಂದ ಯೋಗಾಭ್ಯಾಸ ಶಿಕ್ಷಕನಾಗಿ ದಿನ ನಿತ್ಯ ಯೋಗಭ್ಯಾಸ ಕಲಿಸುವುದಲ್ಲದೆ, ಅಂತಾರಾಷ್ಟ್ರೀಯ ಯೋಗ ದಿನದಂದು ಕಡಲ ತಡಿಯಲ್ಲಿ ಯೋಗ ದಿನಾಚರಣೆ ಆಯೋಜಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿ ಯೋಗ ಶಿಕ್ಷಣದಲ್ಲಿ ಪದವಿ ಪಡೆದು ವಿಯೇಟ್ನಾಂ ದೇಶದಲ್ಲಿರುವ ಬಾಲಕೃಷ್ಣ ಗೌಡ, ಪಡ್ನೂರು ಗ್ರಾಮದ ಕಡ್ತಿಮಾರ್ ಮನೆ ನಿವಾಸಿ ಧರ್ಣಪ್ಪ ಗೌಡ ಮತ್ತು ಹರಿಣಾಕ್ಷಿ ದಂಪತಿ ಪುತ್ರ. ವಿಯೇಟ್ನಾಂನಲ್ಲಿ ಹತ್ತು ವರ್ಷಗಳಿಂದ ವೃತ್ತಿ ನಿರತರಾಗಿದ್ದಾರೆ.
ಬಾಲಕೃಷ್ಣ ಗೌಡ ಮಾತನಾಡಿ, ನಿತ್ಯ ಯೋಗಾಭ್ಯಾಸವಿದ್ದರೂ, ಅಂತಾರಾಷ್ಟ್ರೀಯ ಯೋಗ ದಿನಕ್ಕೆ ವಿಯೇಟ್ನಾಂನಲ್ಲಿ ವಿಶೇಷ ಮಾನ್ಯತೆ ಇದೆ. ಅದಕ್ಕಾಗಿ ಬೆಳಗ್ಗಿನಿಂದ ರಾತ್ರಿವರೆಗೂ ಹಲವೆಡೆ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮಗಳು ನಡೆಯುತ್ತಿತ್ತು. ನಮ್ಮ ಯೋಗ ಶಿಕ್ಷಣ ಕೇಂದ್ರದಿಂದ ವಿಯೇಟ್ನಾಂ ದೇಶದ ಹೈಪಾಂಗ್ ನಗರದ ಕಡಲ ಕಿನಾರೆಯಲ್ಲಿ ಆಕರ್ಷಕ ವಿನ್ಯಾಸಗಳನ್ನು ರೂಪಿಸಿ ಅಂತಾರಾಷ್ಟ್ರೀಯ ಯೋಗ ದಿನಾಚರಿಸಿದ್ದೇವೆ ಎಂದು ತಿಳಿಸಿದ್ದಾರೆ.