ಜಿಲ್ಲೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವ ಸಿದ್ಧತೆ

Mangaluru - Hariprasad Rai


ಮಂಗಳೂರು : ದ.ಕ. ಜಿಲ್ಲಾಡಳಿತ, ಆಯುಷ್ ಇಲಾಖೆ, ಆಯುಷ್ ಕಾಲೇಜುಗಳು ಹಾಗೂ ಯೋಗ ಸಂಘಟನೆಗಳ ಸಹಯೋಗದಲ್ಲಿ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಪೂರ್ವಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯ ವಿವಿಧೆೆಡೆಗಳಲ್ಲಿ ಯೋಗ ಸಂಘಟನೆಗಳು, ಆಯುಷ್ ಕಾಲೇಜುಗಳು, ಆಯುಷ್ಮಾನ್ ಆರೋಗ್ಯ ಮಂದಿರಗಳ ಸಹಯೋಗದಲ್ಲಿ ಸಾರ್ವಜನಿಕರಿಗೆ ಯೋಗ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಯೋಗಾಭ್ಯಾಸದೊಂದಿಗೆ ಪರಿಸರ ಸ್ವಚ್ಛತೆ ಹಾಗೂ ಗಿಡಗಳನ್ನು ನೆಡುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.
ಆಯುಷ್ಮಾನ್ ಆರೋಗ್ಯ ಮಂದಿರ ಬಳ್ಕುಂಜೆ ಇಲ್ಲಿ ಔಷಧೀಯ ಸಸ್ಯಗಳ ಉದ್ಯಾನವನ ನಿರ್ಮಿಸಲಾಗಿದ್ದು, ಪ್ರತೀ ದಿನ ಸಾರ್ವಜನಿಕರಿಗೆ ಯೋಗ ತರಬೇತಿ ನೀಡಲಾಗುತ್ತಿದೆ.ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿಯೇ ಕುಳಿತು ಮಾಡುವ ಯೋಗಾಸನ ಹಾಗೂ ಪ್ರಾಣಾಯಾಮದ ತರಬೇತಿಗಳನ್ನು ಜಿಲ್ಲಾ ಆಯುಷ್ ಇಲಾಖೆ ಹಾಗೂ ಆಯುಷ್ ಕಾಲೇಜುಗಳಿಂದ ಆಯೋಜಿಸಲಾಗುತ್ತಿದೆ.
ಯೋಗದ ಸದುಪಯೋಗವನ್ನು ತಲುಪಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಸುಮಾರು 60,000 ಸಾರ್ವಜನಿಕರಿಗೆ ವಿವಿಧ ಕಡೆಗಳಲ್ಲಿ ಯೋಗ ತರಬೇತಿ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ಕೈಗೊಳ್ಳಲಾಗುತ್ತಿದೆ. ಈ ವರ್ಷದ ಪ್ರಧಾನ ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ಜೂ.21ರಂದು ಬೆಳಗ್ಗೆ 8ಕ್ಕೆ ನಡೆಯಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.