ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಿಲ್ಲಾಮಟ್ಟದ ಯೋಗ ದಿನಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಯೋಗಪಟುಗಳಿಗೆ ಕ್ರೀಡಾಂಗಣ ಪ್ರವೇಶ ದ್ವಾರದಲ್ಲೇ ಗಬ್ಬುವಾಸನೆಯ ಸ್ವಾಗತ ಸಿಗಲಿದೆ!
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಜೂ.21 ರಂದು ಜಿಲ್ಲಾಮಟ್ಟದ ಯೋಗ ದಿನ ಆಚರಿಸಲು ಜಿಲ್ಲಾಡಳಿತ ಸಜ್ಜಾಗುತ್ತಿದೆ. ಆದರೆ, ಇದೇ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲೇ ಹಾದುಹೋಗಿರುವ ಮೋರಿ ಅವ್ಯವಸ್ಥೆಯಿಂದಾಗಿ ಈಡೀ ವಾತಾವರಣ ಗಬ್ಬು ನಾರುತ್ತಿದ್ದು, ಯೋಗಪಟುಗಳಿಗೂ ಈ ದುರ್ನಾತದ ಸ್ವಾಗತವೇ ಕಾದಿದೆ.
ಕ್ರೀಡಾಂಗಣ ತಡೆಗೋಡೆಗೆ ಅಂಟಿಕೊಂಡಂತೆ ಹಾದುಹೋಗಿರುವ ಮೋರಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕಸಕಡ್ಡಿ ತುಂಬಿ ನೀರು ಹರಿಯಲು ತೊಂದರೆಯಾಗಿದೆ. ಬಹಳ ದಿನಗಳಿಂದ ಇದೇ ಸಮಸ್ಯೆ ಇದ್ದರೂ ಮೋರಿ ಸ್ವಚ್ಛತೆ ಬಗ್ಗೆ ಯಾರೊಬ್ಬರೂ ಗಮನ ಹರಿಸುತ್ತಿಲ್ಲ.
ಸ್ವಚ್ಛತೆ ಕಾಣುವುದೇ?: ಆರೋಗ್ಯಭಾಗ್ಯ ಸಾರುವ ಮಹತ್ವದ ಯೋಗ ದಿನಕ್ಕೆ ಕ್ರೀಡಾಂಗಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೂ.21ರಂದು ಬೆಳಗ್ಗೆ 6 ರಿಂದ 8.30ರ ವರೆಗೆ ಕಾರ್ಯಕ್ರಮ ನಿಗದಿಯಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ, ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಯೋಗ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಆದ್ದರಿಂದ ಕ್ರೀಡಾಂಣದ ಆವರಣದಲ್ಲಿ ಸ್ವಚ್ಛತಾ ಕ್ರಮಕೈಗೊಳ್ಳುವ ಜತೆಗೆ ಪ್ರವೇಶದ್ವಾರದಲ್ಲೇ ಎದುರಾಗುವ ಮೋರಿಯ ಸ್ವಚ್ಛತೆಗೆ ಈ ಬಾರಿ ಅಧಿಕಾರಿಗಳು ಗಮನಹರಿಸುವರೇ ಕಾದುನೋಡಬೇಕಿದೆ.
ಉಸಾಬರಿಗೆ ಹೋಗಿಲ್ಲ: ಪ್ರಸ್ತುತ ಜಿಲ್ಲಾಮಟ್ಟದ ಯಾವುದೇ ಕ್ರೀಡೆಗಳು ಹಾಗೂ ಕಾರ್ಯಕ್ರಮಗಳು ಇದೇ ಕ್ರೀಡಾಂಗಣದಲ್ಲಿ ನಡೆಯುತ್ತವೆ, ಉಸ್ತುವಾರಿ ಸಚಿವರಾದಿಯಾಗಿ ಜಿಲ್ಲಾಧಿಕಾರಿ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರಮುಖ ಕೇಂದ್ರಸ್ಥಾನವಾಗಿದೆ. ಆದರೆ, ಕ್ರೀಡಾಂಗಣ ಪ್ರವೇಶದ್ವಾರದ ಬಳಿಯೇ ಗಬ್ಬುವಾಸನೆ ಮೂಗಿಗೆ ರಾಚುತ್ತಿದ್ದರೂ ಯಾರೊಬ್ಬರೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಉಸಾಬರಿಗೆ ಹೋಗಿಲ್ಲ ಎಂಬುದು ಸಾರ್ವಜನಿಕರ ಆರೋಪ.
ತ್ಯಾಜ್ಯ ಮೋರಿ ಸೇರುತ್ತಿದೆ: ದೇವನಹಳ್ಳಿ-ಸೂಲಿಬೆಲೆ ಸಂಪರ್ಕ ರಸ್ತೆಯಲ್ಲಿನ ದೇವನಹಳ್ಳಿ ಟೌನ್ ಕ್ರೀಡಾಂಗಣದ ತಡೆಗೋಡೆ ಬಳಿ ಚರಂಡಿ ಹಾದು ಹೋಗಿದೆ. ಈ ಭಾಗದಲ್ಲಿನ ಅಂಗಡಿಗಳ ತ್ಯಾಜ್ಯ ಇದೇ ಮೋರಿ ಸೇರುತ್ತಿದೆ ಎನ್ನಲಾಗಿದೆ. ಇದರಿಂದ ನೀರಿನ ಹರಿವು ಸಾಧ್ಯವಾಗುತ್ತಿಲ್ಲ. ಇದರಿಂದ ತ್ಯಾಜ್ಯದೊಂದಿಗೆ ಮಲಿನ ನೀರು ಸೇರಿ ಕೊಳೆತು ಗಬ್ಬುವಾಸನೆ ರಾಚುತ್ತಿದೆ.
ಪುರಸಭೆಗೆ ದೂರು: ಈ ಹಿಂದೆ ಹಲವು ಬಾರಿ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದೇವನಹಳ್ಳಿ ಪುರಸಭೆಗೆ ಈ ಬಗ್ಗೆ ದೂರು ನೀಡಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆದರೆ, ಮೋರಿ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮನಸ್ಸು ಮಾಡಿಲ್ಲ.
ಜಿಲ್ಲಾಮಟ್ಟದ ಕ್ರೀಡೆಗಳು ಸೇರಿ ಜಿಲ್ಲಾಮಟ್ಟದ ಕಾರ್ಯಕ್ರಮಗಳು ನಡೆಯುವ ದೇವನಹಳ್ಳಿ ಟೌನ್ ಕ್ರೀಡಾಂಗಣದ ಪ್ರವೇಶದ್ವಾರದಲ್ಲೇ ಗಬ್ಬುವಾಸನೆ ಎದುರಿಸುವಂತಾಗಿದೆ. ಮೋರಿಯಲ್ಲಿ ತ್ಯಾಜ್ಯ ತುಂಬಿಕೊಂಡು, ಕೊಳೆತು ನಾರುತ್ತಿದೆ. ಮಳೆಗಾಲದಲ್ಲಿ ಮೋರಿ ತುಂಬಿ ರಸ್ತೆಯಲ್ಲಿ ಮಲಿನ ನೀರು ಹರಿಯುತ್ತದೆ. ಈ ಭಾಗದಲ್ಲಿ ಓಡಾಡಿದರೆ ಗಬ್ಬುವಾಸನೆ ಮೂಗಿಗೆ ಬಡಿಯುತ್ತದೆ.
ಶಂಕರಪ್ಪ, ದೇವನಹಳ್ಳಿ ಟೌನ್ ನಿವಾಸಿ