ಶಿವಮೊಗ್ಗ ಕುವೆಂಪು ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಯೋಗ ದಸರಾದಲ್ಲಿ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಮತ್ತಿತರರು ಯೋಗಾಸನ ಪ್ರದರ್ಶಿಸಿದರು. 
ಜಿಲ್ಲೆ

ನಾಡಹಬ್ಬದಲ್ಲಿ ಗಮನ ಸೆಳೆದ ಯೋಗ ದಸರಾ

ಶಿವಮೊಗ್ಗ: ನಾಡಹಬ್ಬ ದಸರಾದಲ್ಲಿ ನಾಲ್ಕನೇ ದಿನವಾದ ಭಾನುವಾರ ಕುವೆಂಪು ರಂಗಮಂದಿರದಲ್ಲಿ ನಡೆದ ಯೋಗ ದಸರಾ ಗಮನ ಸೆಳೆಯಿತು.

ಮಹಾನಗರ ಪಾಲಿಕೆ, ನಮ್ಮ ಯೋಗ ಕುಟುಂಬ, ಯೋಗ ಶಿಕ್ಷಣ ಸಮಿತಿ, ಶ್ರೀ ರಾಘವೇಂದ್ರ ಯೋಗ ಕೇಂದ್ರಮ ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್, ಪತಂಜಲಿ ಯೋಗ ಸಮಿತಿ, ದಿ ಆರ್ಟ್ ಆಫ್ ಲಿವಿಂಗ್‌ನ ಶಿವಮೊಗ್ಗ ಜಿಲ್ಲಾ ಶಾಖೆ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ, ನಿಹಾರಿಕಾ ಯೋಗ ಕೇಂದ್ರ ಹಾಗೂ ಅಮೃತ ಯೋಗ ಕೇಂದ್ರದ ಸಹಯೋಗದಲ್ಲಿ ನೂರಾರು ಮಂದಿ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಸರಾಕ್ಕೆ ಮೆರುಗು ನೀಡಿದರು.
ಹಿರಿಯ ವೈದ್ಯ ಡಾ. ಎನ್.ಎಲ್.ನಾಯಕ್ ಅವರು ಯೋಗ ದಸರಾ ಉದ್ಘಾಟಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಮತ್ತಿತರರು ಯೋಗ ಮಾಡಿದರು. ಯೋಗಾಚಾರ್ಯ ಸಿ.ಬಿ.ರುದ್ರಾರಾಧ್ಯ, ಹಿರಿಯ ಯೋಗ ಶಿಕ್ಷಕ ಡಾ. ಭ.ಮ.ಶ್ರೀಕಂಠ, ಎನ್.ಜೆ.ರಾಜಶೇಖರ್ ಮತ್ತಿತರರಿದ್ದರು.
ಆರೋಗ್ಯ ತಪಾಸಣೆ: ಶಿವಮೊಗ್ಗ ನಂಜಪ್ಪ ಆಸ್ಪತ್ರೆಗಳ ಸಮೂಹ, ಕ್ಯಾನ್ಸರ್ ಚಿಕಿತ್ಸಾ ವಿಭಾಗ, ಶ್ರವಣ ಹಿಯರಿಂಗ್ ಏಯ್ಡ ಸೆಂಟರ್ ಮತ್ತು ಸ್ವಿಚ್ ಥೆರಪಿ ಸಹಯೋಗದಲ್ಲಿ ಯೋಗ ದಸರಾದಲ್ಲಿ ಪಾಲ್ಗೊಂಡಿದ್ದವರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಯಿತು.