ಜಿಲ್ಲೆ

ಯೋಗದಿಂದ ಇಂದ್ರಿಯ ನಿಗ್ರಹ ಸಾಧ್ಯ : ಡಾ. ಸೋನಿಯಾ

ಸದೇಶ್ ಕಾರ್ಮಾಡ್

ಮೈಸೂರು: ಯೋಗದಿಂದ ಇಂದ್ರಿಯ ನಿಗ್ರಹ ಸಾಧ್ಯ ಎಂದು ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕಿ ಡಾ. ಸೋನಿಯಾ ಅಭಿಪ್ರಾಯಪಟ್ಟರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಫಾರ್ಮಸಿ ಮತ್ತು ಲೈಫ್ ಸೈನ್ಸ್ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಶಿಬಿರದಲ್ಲಿ ಮಾತನಾಡಿ, ಮಾನಸಿಕ ಹಾಗೂ ದೈಹಿಕ ಸಮತೋಲನೆಗೆ ಯೋಗ ಅಗತ್ಯವಾಗಿದೆ. ಒತ್ತಡದ ಜೀವನದಿಂದ ವ್ಯಕ್ತಿಯು ಅನೇಕ ಸಮಸ್ಯೆಗಳಿಗೆ ಒಳಗಾ ಗುತ್ತಾನೆ. ಇದರಿಂದ ಮಧುಮೇಹ, ರಕ್ತದೊತ್ತಡದಂತಹ ಅನೇಕ ವ್ಯಾದಿಗಳು ಕಾಡುತ್ತವೆ. ದಿನನಿತ್ಯ ಯೋಗಾಭ್ಯಾಸದಿಂದ ಇವೆಲ್ಲವನ್ನು ನಿಯಂತ್ರಿಸಬಹುದು. ವಿದ್ಯಾರ್ಥಿಗಳು ಧ್ಯಾನ, ಪ್ರಾಣಾಯಾಮ, ಸೂರ್ಯ ನಮಸ್ಕಾರಗಳಂತಹ ಸರಳ ಯೋಗಗಳನ್ನು ಪ್ರತಿದಿನ ಅಭ್ಯಸಿಸಿದರೆ, ಮಾನಸಿಕ ಒತ್ತಡವನ್ನು ಹೋಗಲಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ. ಕುಮಾರ್ ಅಕ್ಕಿಹೆಬ್ಬಾಳ್ ಮಾತನಾಡಿ, ಜೀವನದಲ್ಲಿ ನಿರ್ದಿಷ್ಟ ಗುರಿ, ಉದ್ದೇಶಗಳೊಂದಿಗೆ ಮುನ್ನಡೆಯಬೇಕು. ಪರಾವಲಂಬಿಗಳಾಗದೆೆ, ಸ್ವಸಾಮರ್ಥ್ಯ ಹಾಗೂ ಸ್ವಾನುಭವಗಳಿಂದ ಕಾರ್ಯನಿರ್ವಹಿಸಬೇಕು. ಯಶಸ್ಸಿಗೆ ಶಿಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೇ ಬುದ್ಧಿವಂತಿಕೆಯಿದ್ದರೂ ಪರಿಶ್ರಮವಿಲ್ಲದಿದ್ದರೆ ಸಾಧನೆ ಕಷ್ಟಸಾಧ್ಯ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪವಿರಬೇಕು. ಸ್ವಾಧ್ಯಾಯ ಬಹಳ ಮುಖ್ಯವಾದದು ಎಂದು ಹೇಳಿದರು.

ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸಗಳಲ್ಲಿ ಪಾಲ್ಗೊಂಡಿದ್ದರು. ಸಂಜೆ ದೇಸಿ ಆಟಗಳನ್ನು ಉತ್ಸಾಹದಿಂದ ಆಡಿದರು. ಶಿಬಿರಾರ್ಥಿಗಳು ಮೂಲ ಶ್ರೀಮಠ, ಶ್ರೀ ಮಹದೇಶ್ವರರು, ರಾಗಿ ಬೀಸಿದ ಕಲ್ಲು ಹಾಗೂ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳ ದರ್ಶನ ಪಡೆದರು. ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಯ ಬಗ್ಗೆ ಮಾಹಿತಿ ಪಡೆದು, ಮಾವಿನ ತೋಟ, ವಿವಿಧ ಬೆಳೆಗಳು ಹಾಗೂ ಗೋ-ಶಾಲೆಯನ್ನು ವೀಕ್ಷಿಸಿದರು. ಕಪಿಲಾ ನದಿ ತೀರದಲ್ಲಿ ಪ್ರಾರ್ಥನೆ ಹಾಗೂ ಕಪಿಲಾರತಿ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಗಳಿಂದ ಪಾಲ್ಗೊಂಡರು. ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಶಿಬಿರದಲ್ಲಿ ಒಟ್ಟು 140 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.