ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ಜೀವನ ಶೈಲಿಯಲ್ಲಿ ಶರೀರ ಸದೃಢವಾಗಿ ಹಾಗೂ ಮನಸ್ಸು ಶಾಂತ, ನಿರ್ಮಲವಾಗಿರಲು ಯೋಗ ವಿದ್ಯೆಯಿಂದ ಮಾತ್ರ ಸಾಧ್ಯ. ಇಂತಹ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಸಾಧನೆಗೆ ಪೂರಕವಾಗಿದೆ ಎಂದು ಪರಮಹಂಸ ಯೋಗ ಪೀಠದ ಡಾ. ಶೋಭಾ ಹೂಲಿಕಟ್ಟಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ದಿನೇಶ ಪರಡ್ಡಿ ಸ್ಮರಣಾರ್ಥ ದತ್ತಿ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೀವನ ಧರ್ಮ ಕುರಿತು ಉಪನ್ಯಾಸ ನೀಡಿದರು.
ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ನಾವು ಸೇವಿಸುವ ಆಹಾರ ಹಾಗೂ ಇತರ ಪದಾರ್ಥಗಳೆಲ್ಲ ವಿಷಯುಕ್ತ, ಕಲಬೆರಕೆಯಿಂದ ಕೂಡಿವೆ. ಇದರಿಂದ ದಿನಕ್ಕೊಂದು ಹೊಸ ರೋಗಕ್ಕೆ ತುತ್ತಾಗುತ್ತಿರುವುದು ವಿಷಾದಕರ. ಹಿತ-ಮಿತ ಆಹಾರ, ವಿಹಾರದಿಂದ ಮನುಷ್ಯ ಆರೋಗ್ಯವಂತನಾಗಿ ಜೀವನ ಸಾಗಿಸಬಹುದು. ವಯೋಮಾನಕ್ಕೆ ತಕ್ಕಂತೆ ಆಹಾರ ಸೇವನೆ, ಯೋಗದಿಂದ ಮನುಷ್ಯ ನಿರೋಗಿಯಾಗಿ ಬಾಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮಾನಸಿಕ ನೆಮ್ಮದಿಗಾಗಿ ಇಂತಹ ಯುಕ್ತವಾದ ಜೀವನ, ಧರ್ಮಪಾಲನೆ ಮಾಡಿದರೆ ಜೀವನಕ್ಕೊಂದು ಬೆಲೆ ಬರುವುದು. ಮುಖ್ಯವಾಗಿ ಯುವಕರು ಇದನ್ನು ಅರ್ಥೈಯಿಸಿಕೊಳ್ಳಬೇಕು ಎಂದರು.
ಅನಿಲ ಪರಡ್ಡಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ಡಾ. ಶಿವಾನಂದ ಶೆಟ್ಟರ, ಮಹಾಂತೇಶ ನರೇಗಲ್, ಸಂಗಮೇಶ ಮೆಣಸಿನಕಾಯಿ, ಸಿದ್ಧರಾಮ ಹಿಪ್ಪರಗಿ, ಪರಡ್ಡಿ ಪರಿವಾರದವರು, ಅಭಿಮಾನಿಗಳು, ಇತರರು ಇದ್ದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.