ಜಿಲ್ಲೆ

ಯೋಗದಿಂದ ದೇಹ ಮನಸ್ಸುಗಳ ಅನುಸಂಧಾನ, ಕೃಷ್ಣಾ ಸಂಪಗಾಂವಕರ ಮಹಾರಾಜರ ಅಭಿಪ್ರಾಯ

Dharwada - Basavaraj Idli

ಹುಬ್ಬಳ್ಳಿ: ಯೋಗವು ಕೇವಲ ಶಾರೀರಿಕ ವ್ಯಾಯಾಮವಲ್ಲ, ಮಾನಸಿಕ ಹಾಗೂ ಆಧ್ಯಾತ್ಮಿಕ ಜಾಗೃತಿ ಉಂಟು ಮಾಡುವುದು ಸೇರಿ ಮೂರು ಅಂಶಗಳನ್ನು ಒಳಗೊಂಡಿದೆ. ಸದೃಢ ದೇಹದಲ್ಲಿ ಒಳ್ಳೆಯ ಮನಸ್ಸು ಇರುತ್ತದೆ ಎಂಬಂತೆ ದೇಹ- ಮನಸ್ಸುಗಳ ಅನುಸಂಧಾನ ಮಾಡುವುದೇ ಯೋಗವಾಗಿದೆ ಎಂದು ವಿಜಯಪುರದ ಕನ್ನೂರ ಶಾಂತಿ ಕುಟೀರದ ಕೃಷ್ಣಾ ಸಂಪಗಾಂವಕರ ಮಹಾರಾಜರು ಹೇಳಿದರು.

ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಯೋಗ ಸ್ಪರ್ಶ ಪ್ರತಿಷ್ಠಾನ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ಪಿವೈಎಸ್ಎಸ್) ಹಾಗೂ ಹುಬ್ಬಳ್ಳಿ ಧಾರವಾಡ ಬಂಟರ ಸಂದ ಆಶ್ರಯದಲ್ಲಿ ಇಲ್ಲಿಯ ಇಂದಿರಾ ಗಾಜಿನ ಮನೆ ಎದುರಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಿಶ್ವ ಯೋಗ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಕ್ತಾರರಾಗಿ ಅವರು ಮಾತನಾಡಿದರು.

ಮನುಷ್ಯನ ಅಂತರಂಗದ ಶುದ್ಧಿಯೂ ಸಹ ವ್ಯಾಯಾಮವಾಗಿದೆ. ಬಹಿರಂಗ ಹಾಗೂ ಅಂತರಂಗದ ಬೆಳವಣಿಗೆಯು ಯೋಗದಿಂದ ಸಾಧ್ಯ. ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಇಂತಹ ಯೋಗವನ್ನು ಪ್ರತಿಯೊಂದು ಶಾಲೆಗೂ ತೆಗೆದುಕೊಂಡು ಹೋಗಬೇಕು. ಮಕ್ಕಳಿಗೆ ತಲುಪಿಸಬೇಕು ಎಂದರು.

ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರೂ ಯೋಗಮಯ ಜೀವನ ಅಳವಡಿಸಿಕೊಳ್ಳುವುದು ಅಗತ್ಯವಿದೆ. ಮನುಷ್ಯನ ಹರಿದಾಡುವ ಮನಸ್ಸು ನಿಯಂತ್ರಿಸುವುದು ಯೋಗ. ಕಲ್ಪನೆಗಳ ಹೊಯ್ದಾಟದಲ್ಲಿ ಮನೋನಿಗ್ರಹವು ಇಂದಿನ ಬಹುದೊಡ್ಡ ಸವಾಲಾಗಿದೆ. ಹಾಗಾಗಿ ಯೋಗವು ಉಸಿರು ಜೀವನ ಆಗಬೇಕು. ಅದರಿಂದ ಸದೃಢ ಭಾರತ ನಿರ್ಮಾಣವಾಗಲಿದೆ ಎಂದು ಹೇಳಿದರು.

ಬಂಟರ ಸಂದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಯೋಗದಿಂದ ಬದುಕು ಆರೋಗ್ಯದ ಕಡೆ ಹೋಗುತ್ತದೆ. ಇಂತಹ ಮಹೋನ್ನತ ಉದ್ದೇಶದ ಕಾರ್ಯಕ್ರಮಗಳಿಗೆ ನಮ್ಮ ಸಂ ಸದಾ ಪ್ರೋತ್ಸಾಹ ನೀಡುತ್ತದೆ. ಮುಂದೆಯೂ ನೀಡಲಿದೆ ಎಂದರು.

ಇಂದಿನ ಕಾಲದಲ್ಲಿ ಮಕ್ಕಳು ದಾರಿ ತಪ್ಪುತ್ತಿವೆ. ಸಂಸ್ಕಾರ ಕಡಿಮೆಯಾಗುತ್ತಿದೆ. ಈ ದಿಸೆಯಲ್ಲಿ ಪಾಲಕರು ಮಕ್ಕಳಿಗಾಗಿ ಒಂದಿಷ್ಟು ಸಮಯ ಕೊಡಬೇಕು. ಇದರಿಂದ ನಮ್ಮ ಸಂಸತಿ, ಸಂಸ್ಕಾರ ಬೆಳೆಸಿಕೊಂಡು ಹೋಗಬಹುದು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಎಸ್ಪಿವೈಎಸ್ಎಸ್ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಜೋಶಿ ಮಾತನಾಡಿ, ಸಮಿತಿಯು ಮಹಾನಗರದ ವಿವಿಧ ಬಡಾವಣೆಗಳಲ್ಲಿ ಉಚಿತ ಯೋಗ ಶಿಬಿರ ನಡೆಸುತ್ತಿದೆ. ಈ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

ಸಮಿತಿಯ ವೆಂಕಟೇಶ ಕಾಟವೆ, ಮಧು ದಾನಮ್ಮನವರ ಪರಿಚಯಿಸಿದರು. ಸ್ನೇಹಾ ಬಾಡಗಿ, ಮಹದೇವ ಹೊಳೆಯಣ್ಣವರ ಯೋಗಾಭ್ಯಾಸ ಹೇಳಿಕೊಟ್ಟರು. ರೋಹಿಣಿ ಪಾಟೀಲ, ಸಂಗೀತಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ಯೋಗ ಸ್ಪರ್ಶ ಪ್ರತಿಷ್ಠಾನದ ದಯಾನಂದ ಮಗಜಿಕೊಂಡಿ, ವಿಜಯವಾಣಿ ಜಾಹೀರಾತು ವಿಭಾಗದ ಉಪ ಮುಖ್ಯ ವ್ಯವಸ್ಥಾಪಕರಾದ ಸಂತೋಷ ಇನಾಮತಿ, ವಿನೋದಕುಮಾರ ಉಪರೆ, ಮಂಜುಳಾ ನಾಗಶೆಟ್ಟಿ, ಅನಿಲ ಲದ್ವಾ, ಬಾಲಕೃಷ್ಣ, ವಿಶ್ವನಾಥ ಗುಡ್ಡದ, ಮಂಜುನಾಥ ಭಾವಿಕಟ್ಟಿ, ಲಕ್ಷಿ$್ಮ ಪವಾರ, ಅಮರಾವತಿ ಗಾಣಗಿ, ಇತರರು ಇದ್ದರು.