ಜಿಲ್ಲೆ

VRL ಸಹಭಾಗಿತ್ವದ ಬಾಬಾ ರಾಮದೇವ್​ ನೇತೃತ್ವದ ಯೋಗ ಶಿಬಿರದ ಮೂರನೇ ದಿನಕ್ಕೆ ಚಾಲನೆ

ಹುಬ್ಬಳ್ಳಿ: ವಿಆರ್​ಎಲ್​ ಲಾಜಿಸ್ಟಿಕ್, ವಿಜಯವಾಣಿ ಕನ್ನಡದ ನಂ. 1 ಪತ್ರಿಕೆ, ದಿಗ್ವಿಜಯ 24x7 ನ್ಯೂಸ್ ಚಾನೆಲ್, ಪವರ್ ನ್ಯೂಸ್ ಹಾಗೂ ಪತಂಜಲಿ ಯೋಗ ಪೀಠದ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಯೋಗಗುರು ಬಾಬಾ ರಾಮದೇವ ನೇತೃತ್ವದಲ್ಲಿ ಏರ್ಪಡಿಸಲಾಗಿರುವ ಯೋಗ ಶಿಬಿರದ ಮೂರನೇ ದಿನಕ್ಕೆ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು.

ರಾಮಕೃಷ್ಣ ವಿವೇಕಾನಂದ ಆಶ್ರಯದ ರಘುವೀರಾನಂದ ಸ್ವಾಮೀಜಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ 3ನೇ ದಿನದ ಯೋಗ ಶಿಬಿರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಯೋಗದಿಂದ ಎಲ್ಲರಿಗೂ ದೈಹಿಕ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಸಿಗಲಿ ಎಂದರು.

ರಘುವೀರಾನಂದ ಸ್ವಾಮೀಜಿ ಮಾತನಾಡಿ, ಯೋಗದಿಂದ ಗತಕಾಲದ ಭಾರತದ ವೈಭವ ಮತ್ತೆ ಮರಳುವಂತಾಗಲಿ ಎಂದರು.

VRL ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಶ್ರೀಮತಿ ವಾಣಿ ಆನಂದ ಸಂಕೇಶ್ವರ, ಮಹೇಂದ್ರ ಸಿಂಘಿ ಹಾಗೂ ದೇವಪ್ಪಜ್ಜ ಮತ್ತಿತರರಿದ್ದರು.