ಜಿಲ್ಲೆ

ವಿದೇಶದಲ್ಲಿ ಬೆಳಗಾವಿ ಯುವಕನ ಯೋಗಾ'ಯೋಗ'

ಬೆಳಗಾವಿ: ವಿದೇಶಗಳಲ್ಲಿ ಯೋಗಕ್ಕೆ ಬಹಳಷ್ಟು ಮಹತ್ವ ನೀಡುತ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಯೋಗದಿಂದ ಶಾರೀರಿಕ, ಮಾನಸಿಕ ಆರೋಗ್ಯ ಸಾಧ್ಯ ಎನ್ನುವುದನ್ನು ಅರಿತಿದ್ದಾರೆ. ಹೀಗಾಗಿ ಭಾರತದಲ್ಲಿ ಯೋಗ ಸಂಸ್ಕೃತಿಯನ್ನು ಪುನಃ ತರಬೇಕಾಗಿದೆ. ಹಿತ್ತಲ ಗಿಡ ಮದ್ದಲ್ಲ ಎನ್ನುತ್ತಾರೆ. ಹಿತ್ತಲ ಗಿಡದಲ್ಲೂ ಮದ್ದಿದೆ ಎನ್ನುವುದು ತಿಳಿಸಿಕೊಡುವುದೇ ನನ್ನ ಗುರಿ...
 ಇದು ವಿಯೆಟ್ನಾಂನಲ್ಲಿ 8 ವರ್ಷದಿಂದ ನೆಲೆಸಿರುವ ಬೆಳಗಾವಿ ಬಡಕಲ್ ಗಲ್ಲಿಯ ಯೋಗ ಶಿಕ್ಷಕ ಗಣೇಶ ಶಾಮ್ ಮಹಿಂದ್ರಕರ ಅವರ ಮಾತು. ವಿಯೆಟ್ನಾಂನಿಂದ ಗಣೇಶ ಅವರು ವಿಜಯವಾಣಿಯೊಂದಿಗೆ ತಮ್ಮ ಗುರಿ, ಉದ್ದೇಶ ಹಂಚಿಕೊಂಡಿದ್ದಾರೆ. ಬಿಸಿಎ ಪದವಿ ಪಡೆದಿರುವ ಗಣೇಶ ಅವರು ನೌಕರಿಗೆ ಹೋಗದೆ ಯೋಗದ ಮಹತ್ವ ಅರಿತು, ವಿಯೆಟ್ನಾಂ ನಲ್ಲಿ ‘ಯೋಗ ದೀಪ’ ಯೋಗ ಶಿಕ್ಷಣ ಸಂಸ್ಥೆ ತೆರೆದು ಯೋಗಾಭ್ಯಾಸ ಹೇಳಿಕೊಡುವುದರ ಮೂಲಕ ವಿದೇಶದಲ್ಲಿ ಕನ್ನಡದ ಕಂಪು ಸೂಸುತ್ತಿದ್ದಾರೆ.
 ಯೋಗ ಪಸರಿಸುವ ಹಂಬಲ: ನಮ್ಮಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ತೊಡೆದು ಹಾಕುವುದಕ್ಕಾಗಿ ಎಲ್ಲೆಡೆ ಯೋಗ ಪಸರಿಸಬೇಕಾಗಿದೆ. ಯೋಗದಿಂದ ಜೀವನದಲ್ಲಿ ಹೊಸ ಚೈತನ್ಯ ತಂದುಕೊಳ್ಳಬಹುದಾಗಿದೆ. ಹೀಗಾಗಿ ನನಗೆ ಯೋಗ ಜೀವನದ ಭಾಗ ಎನಿಸಿದ್ದರಿಂದ ನಾನು ನೌಕರಿ ಮಾಡದೆ ಯೋಗ ಜಾಗೃತಿ ಮೂಡಿಸುತ್ತಿದ್ದೇನೆ. ಅದರಲ್ಲಿಯೇ ನನಗೆ ತೃಪ್ತಿ ಇದೆ ಎಂದು ಗಣೇಶ ಮನದಾಳ ಬಿಚ್ಚಿಟ್ಟರು.
 ವಿವಿಧೆಡೆ ಯೋಗ ತರಬೇತಿ:
 ಬೆಂಗಳೂರು, ಬೆಳಗಾವಿ, ಧಾರವಾಡ, ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶ ಅವರು ವಾರಾಂತ್ಯದ ಯೋಗ ಕಾರ್ಯಾಗಾರ ಆಯೋಜಿಸುತ್ತ ಬರುತ್ತಿದ್ದಾರೆ. ಶುಕ್ರವಾರ ಸಂಜೆ ಆರಂಭವಾಗುವ ಯೋಗ ಕಾರ್ಯಾಗಾರವು ಭಾನುವಾರ ರಾತ್ರಿ ಕೊನೆಗೊಳ್ಳುತ್ತದೆ. ಕರ್ನಾಟಕ ಸೇರಿ ವಿವಿಧೆಡೆಯಿಂದ ಯೋಗ ತರಬೇತಿ ನೀಡುವಂತೆ ಕರೆಗಳು ಬರುತ್ತವೆ. ಗಣೇಶ ನೋಂದಾಯಿತ ಯೋಗ ಶಿಕ್ಷಕ, ಯೋಗಾ ಅಲೈಯನ್ಸ್ ಪ್ರಮಾಣ ಪತ್ರ ಹೊಂದಿದ್ದಾರೆ.
 ಯೋಗದಲ್ಲಿ ಸಾಧನೆ ಪರಿಗಣಿಸಿ ಬೆಂಗಳೂರಿನ ಯೋಗಾ ವಿವಿ ಎಸ್‌ವಿವೈಎಎಸ್‌ಎ ಚಿನ್ನದ ಪದಕ, ಯೋಗ ಭೂಷಣ ಬಹುಮಾನ ನೀಡಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಪ್ರಶಸ್ತಿಗಳು ಲಭಿಸಿವೆ. ವಿಯೆಟ್ನಾಂ ನಲ್ಲಿ 6 ವರ್ಷ ಯೋಗ ತರಬೇತಿ ನೀಡಿದ್ದಾರೆ. ಥಾಯ್ಲೆಂಡ್‌ನಲ್ಲಿ ಯೋಗ ಶಿಕ್ಷಕರನ್ನು ತಯಾರಿಸಿದ್ದಾರೆ. ಟೆಕ್ವೊಂಡೋನಲ್ಲಿ ಬ್ಲಾಕ್ ಬೆಲ್ಟ್ ಕೂಡ ಪಡೆದಿದ್ದಾರೆ. ಯೋಗದಿಂದ ಶಾರೀರಿಕ, ಮಾನಸಿಕ ಆರೋಗ್ಯ ವೃದ್ದಿಯ ಜತೆಗೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ವಿದೇಶದವರಿಗೆ ಯೋಗದ ಗುಟ್ಟು ಗೊತ್ತಾಗಿದೆ. ಯೋಗದಿಂದ ಸಮುದಾಯಗಳಲ್ಲಿ ಉತ್ತಮ ಬದಲಾವಣೆಗಳು ಆಗುತ್ತಿವೆ ಎಂದು ಗಣೇಶ ಮಹಿಂದ್ರಕರ ಹೇಳುತ್ತಾರೆ.