ಮಡಿಕೇರಿ
ಸಮೀಪದ ಮದೆನಾಡುವಿನ ಬಿಜಿಎಸ್ ಶಾಲೆ ವಿದ್ಯಾರ್ಥಿನಿ ಸಿಂಚನಾ ಮಂಗಳವಾರ (ಅ.28) ಯೋಗದಲ್ಲಿ 3 ವಿಶ್ವದಾಖಲೆಯ ಪ್ರದರ್ಶನ ನೀಡಲಿದ್ದಾಳೆ ಎಂದು ಮೈಸೂರು ಮತ್ತು ಕೊಡಗು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10.30ಕ್ಕೆ ಮದೆನಾಡುವಿನ ಬಿಜಿಎಸ್ ಸಭಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸುವರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವೈಷ್ಣೋಯಿ ಉಪಸ್ಥಿತಿಯಲ್ಲಿ ಯೋಗ ದಾಖಲೆಯ ಪ್ರದರ್ಶನ ನಡೆಯಲಿದೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಡಿಡಿಪಿಐ ಬಸವರಾಜು, ಬಿಇಒ ಮಹೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಯೋಗಪಟು ಸಿಂಚನಾಳ ತಾಯಿ ರೇಣುಕಾ ಮಾತನಾಡಿ ಕಳೆದ 7-8 ವರ್ಷಗಳಿಂದ ಸಿಂಚನಾ ಯೋಗಾಭ್ಯಾಸ ಮಾಡುತ್ತಿದ್ದಾಳೆ. ಈಗಾಗಲೇ ಹಲವು ದಾಖಲೆಗಳನ್ನು ಮಾಡಿದ್ದಾಳೆ. ಡಿಂಬಾಶನಸಲ್ಲಿ 30 ನಿಮಿಷ 5 ಸೆಕೆಂಡ್ ಇದ್ದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಮಂಗಳವಾರ (ಅ.28) ನಡೆಯುವ ಕಾರ್ಯಕ್ರಮದಲ್ಲಿ ಖಂಡಪೀಡಾಶನ ಸ್ಥಿತಿಯಲ್ಲಿ 1 ನಿಮಿಷ ಇರುವುದು, ಧನುರಾಶನದಲ್ಲಿ ನಿಮಿಷಕ್ಕೆ 15 ಬಾರಿ ತಿರುಗುವುದು ಹಾಗೂ ಡಿಂಬಾಶನದಲ್ಲಿ 10 ಬಾರಿ ತಿರುಗುವುದು... ಹೀಗೆ ಮೂರು ದಾಖಲೆಗಳನ್ನು ಮಾಡಲಿದ್ದಾಳೆ ಎಂದು ತಿಳಿಸಿದಳು.
ಯೋಗ ಶಿಕ್ಷಕ ಕೆ.ಕೆ. ಮಹೇಶ್ ಮಾತನಾಡಿ ಸಿಂಚನಾ ಕೊಡಗಿನ ವಿಶೇಷ ಪತಿಭೆಯಾಗಿದ್ದು, ತನ್ನ ತಾಯಿಯ ಪ್ರೋತ್ಸಾಹದಿಂದ ಸಾಧನೆ ಮಾಡುತ್ತಿದ್ದಾಳೆ. ಈಕೆಯ ಸಾಧನೆ ನೋಡಲು ಪುಟ್ಟ ಗ್ರಾಮ ಮದೆನಾಡು ಉತ್ಸವದ ರೀತಿಯಲ್ಲಿ ಸಜ್ಜಾಗುತ್ತಿದೆ ಎಂದರು.
ಸಿಂಚನಾ ತಂದೆ ಕೀರ್ತಿಕುಮಾರ್, ಬಿಜಿಎಸ್ ಸಂಸ್ಥೆ ಆಡಳಿತಾಧಿಕಾರಿ ಸುಧಾಕರ್ ಸುದ್ದಿಗೋಷ್ಠಿಯಲ್ಲಿದ್ದರು.