ಜಿಲ್ಲೆ

ಯೋಧರಿಗೆ ಹೀಗೊಂದು ನಮನ

ಸುನಿಲ್ ಪೊನ್ನೇಟಿ

ಮಡಿಕೇರಿ:

ಸ್ವಾತಂತ್ರ್ಯೋತ್ಸವದ ೭೫ನೇ ವರ್ಷದ ಸಂಭ್ರಮದಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ದೇಶಾದ್ಯಂತ ’ಮೇರಿ ಮಾಟಿ ಮೇರಿ ದೇಶ್’ (ನನ್ನ ಮಣ್ಣು, ನನ್ನ ದೇಶ) ಅಭಿಯಾನ ನಡೆಸಲಾಗುತ್ತಿದೆ. ಮಕ್ಕಳಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚಲು ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಈ ಅಭಿಯಾನಕ್ಕಾಗಿಯೇ ರೂಪಿಸಲಾಗಿದೆ. ಮೂರು ಹಂತಗಳಲ್ಲಿ ನಡೆಯುವ ಅಭಿಯಾನ ಆ.೯ರಿಂದಲೇ ಗ್ರಾ.ಪಂ. ಮಟ್ಟದಿಂದ ಆರಂಭವಾಗಿದ್ದು. ಈ ತಿಂಗಳ ೩೦ರ ತನಕ ಮುಂದುವರಿಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಂಡ ಅಭಿಪ್ರಾಯದಂತೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮದಲ್ಲಿ ವೀರಯೋಧರಿಗೆ ಗೌರವ ನಮನ ಸಲ್ಲಿಸುವ ಸಲುವಾಗಿ "ನನ್ನ ಮಣ್ಣು ನನ್ನ ದೇಶ" ಅಭಿಯಾನ ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮ ಆಚರಣೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂಪೂರ್ಣವಾಗಿ ಗ್ರಾಮ ಪಂಚಾಯತಿ ಜವಾಬ್ದಾರಿಯಲ್ಲಿ ಅಭಿಯಾನ ನಡೆಸಲಾಗುತ್ತಿದ್ದು ಅಭಿಯಾನದ ಯಶಸ್ಸಿಗಾಗಿ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಸಮುದಾಯದ ನೆರವು ಪಡೆದುಕೊಂಡು ಕಾರ್ಯಕ್ರಮ ನಡೆಸಬೇಕಾಗಿದೆ. ಆ.೯ರಿಂದ ಆ. ೧೫ರ ತನಕ ಗ್ರಾ.ಪಂ.ಗಳು ಈ ಕಾರ್ಯಕ್ರಮ ನಡೆಸುವಂತೆ ಸರ್ಕಾರ ಸೂಚಿಸಿದೆ.

ಅಭಿಯಾನದ ಹಿನ್ನೆಲೆಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರ ಗೌರವಾರ್ಥ ಪ್ರತಿಯೊಂದು ಗ್ರಾಮ ಪಂಚಾಯಿತಿ ಕೂಡ ಶಿಲಾಫಲಕವನ್ನು ಸ್ಥಾಪಿಸಬೇಕು. ಶಿಲಾಫಲಕದಲ್ಲಿ ಗ್ರಾಮ ಪಂಚಾಯತಿ ಹೆಸರು, ಪ್ರಧಾನ ಮಂತ್ರಿಗಳ ೨೦೪೭ರ ಘೋಷ ವಾಕ್ಯ, ಮುಖ್ಯಮಂತ್ರಿಗಳ ಘೋಷ ವಾಕ್ಯ, ವಚನಕಾರ ಬಸವಣ್ಣನವರ ವಚನ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರುಗಳನ್ನು ಬರೆಸಬೇಕು. ಶಿಲಾಫಲಕವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಅಮೃತ ಸರೋವರದ ಬಳಿ ಅಥವಾ ಅಮೃತ ಸರೋವರ ಲಭ್ಯವಿಲ್ಲದಿದ್ದಲ್ಲಿ ಗ್ರಾಮ ಪಂಚಾಯತಿ ಕಚೇರಿ ಅಥವಾ ಸರ್ಕಾರಿ ಶಾಲೆ ಬಳಿ ನಿರ್ಮಿಸಬೇಕು. ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಶಿಲಾಫಲಕವನ್ನು ನಿರ್ಮಿಸಲೇಬೇಕಾಗಿದೆ. ಇದರ ವಿನ್ಯಾಸವನ್ನೂ ಸರ್ಕಾರವೇ ರೂಪಿಸಿದೆ. ಒಂದು ವೇಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೇಶಕ್ಕಾಗಿ ಮಡಿದ ವೀರ ಯೋಧರಿಲ್ಲದಿದ್ದಲ್ಲಿ ’ಮಾತೃಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳು’. ಎಂದು ಬರೆಯಿಸಬೇಕಾಗುತ್ತದೆ.

ಅಭಿಯಾನದ ಅಂಗವಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಆ. ೧೫ರಂದು ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಪಂಚಪ್ರಾಣ ಶಪಥಗಳನ್ನು ತೆಗೆದುಕೊಳ್ಳಬೇಕು.

ಅಭಿವೃದ್ಧಿ ಭಾರತದ ನಿರ್ಮಾಣದಲ್ಲಿ ಪಾಲ್ಗೊಳ್ಳುವುದು, ಯಾವುದೇ ರೀತಿಯ ವಸಾಹತುಶಾಹಿ ಮನಸ್ಥಿತಿಯ ಕುರುಹನ್ನು ತೊಡೆದು ಹಾಕುವುದು, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು, ದೇಶದ ಏಕತೆ ಮತ್ತು ಒಗ್ಗಟ್ಟಿಗಾಗಿ ಶ್ರಮಿಸುವುದು, ದೇಶಕ್ಕಾಗಿ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದು, ದೇಶಕ್ಕಾಗಿ ತ್ಯಾಗ ಬಲಿದಾನಗೈದ ಕೆಚ್ಚೆದೆಯ ವೀರರಿಗೆ ಗೌರವ ಸಲ್ಲಿಸುವುದು, ದೇಶದ ರಕ್ಷಣೆ ಮತ್ತು ಪ್ರಗತಿಗೆ ಸಮರ್ಪಿಸಿಕೊಳ್ಳುವುದಾಗಿ ಪ್ರಮಾಣ ಮಾಡುವುದು ಪಂಚಪ್ರಾಣ ಶಪಥದಲ್ಲಿ ಸೇರಿದೆ.

ಈ ಅಭಿಯಾನದಲ್ಲಿ ವಸುಧಾ ವಂದನ್ ಎನ್ನುವ ಕಾರ್ಯಕ್ರಮ ನಡೆಸಬೇಕಿದ್ದು ಭೂಮಿಯನ್ನು ಹಸಿರೀಕರಣಗೊಳಿಸಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀವವೈವಿಧ್ಯ ಹಾಗೂ ಔಷಧೀಯ ಗುಣವುಳ್ಳ ೭೫ ಸಸಿಗಳನ್ನು ಅಮೃತ ಸರೋವರ ಸ್ಥಳಗಳಲ್ಲಿ ನೆಡಬೇಕು. ಇಲ್ಲಿ ’ಅಮೃತ ವಾಟಿಕ’ ಅಭಿವೃದ್ಧಿ ಪಡಿಸುವುದರೊಂದಿಗೆ ’ವಸುಧಾ ವಂದನ್’ ಕಾರ್ಯಕ್ರಮದ ಮೂಲಕ ಮಾತೃಭೂಮಿಗೆ ಗೌರವ ಸಲ್ಲಿಸಬೇಕು. ಸಸಿಗಳ ಆರೈಕೆ ಮತ್ತು ಸುಸ್ಥಿರತೆಗಾಗಿ ಸಸಿಗಳನ್ನು ದತ್ತು ಪಡೆದವರ ಹೆಸರನ್ನು ಸಸಿಗಳಿಗೆ ನಾಮಕರಣ ಮಾಡಲು ಸಲಹೆ ನೀಡಲಾಗಿದೆ.

ಅಮೃತ ಸರೋವರ ತಾಣಗಳಲ್ಲಿ ಮಕ್ಕಳಿಗೆ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳ ಆಯೋಜನೆ, ಸಾಂಪ್ರದಾಯಿಕ ಗ್ರಾಮೀಣ ಆಟಗಳ ಆಯೋಜನೆಮಾಡುವ ಬಗ್ಗೆ ಸೂಚಿಸಲಾಗಿದೆ. ಪ್ರಮುಖವಾಗಿ ಆ. ೧೫ರಂದು ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಡಿದಿರುವ ವೀರ ಸೇನಾನಿಗಳ ಕುಟುಂಬದವರು, ಬದುಕಿರುವ ಸೇನಾನಿಗಳು, ಸ್ವಾತಂತ್ರ್ಯ ಹೋರಾಟಗಾರರು, ನಿವೃತ್ತ ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಧಿಕಾರಿಗಳು,ಸಿಬ್ಬಂದಿ ಆಹ್ವಾನಿಸಿ ಗೌರವಿಸುವುದು, ವೀರ ಸೇನಾನಿಗಳ ಸೇವೆಯ ಮಹತ್ವ, ದೇಶ ಪ್ರೇಮ ಹಾಗೂ ಸ್ವಾತಂತ್ರ್ಯದ ಮಹತ್ವದ ಬಗ್ಗೆ ತಜ್ಞರಿಂದ ಉಪನ್ಯಾಸ, ಸ್ಥಳೀಯ ಸಂಪ್ರದಾಯಗಳಂತೆ ಗೌರವ ಸಮರ್ಪಣೆ, ಹರ್ ಘರ್ ತಿರಂಗಾ ಕಾರ್ಯಕ್ರಮವೂ ’ಮೇರಿ ಮಾಟಿ ಮೇರಿ ದೇಶ್’ ಅಭಿಯಾನದಲ್ಲಿ ಸೇರಿದೆ.

ತಾಲೂಕು ಹಂತದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಮಣ್ಣು ಸಂಗ್ರಹಿಸಿ, ಸ್ವಯಂ ಸೇವಕರ ಮೂಲಕ ತಾಲೂಕು ಮಟ್ಟಕ್ಕೆ ತರಬೇಕು. ತಾಲೂಕು ಮಟ್ಟದಲ್ಲಿ ವಿವಿಧ ಗ್ರಾಮ ಪಂಚಾಯತಿಗಳಿಂದ ಬಂದ ಮಣ್ಣನ್ನು ಸ್ವೀಕರಿಸಿ, ಒಟ್ಟುಗೂಡಿಸಿ, ಸರ್ವಾಲಂಕೃತ ಕಲಶದ ವ್ಯವಸ್ಥೆ ಮಾಡಿ ರಾಷ್ಟ್ರಮಟ್ಟಕ್ಕೆ ಕಳುಹಿಸಿಕೊಡಬೇಕಾಗುತ್ತದೆ.