ಲಕ್ಷ್ಮೇಶ್ವರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ವಿಪರೀತ ಮಳೆಯಿಂದ ಮುಂಗಾರಿನ ಮೊದಲ ಹಂತದ ಬೆಳೆಗಳಾದ ಹೆಸರು, ಶೇಂಗಾ, ಉಳ್ಳಾಗಡ್ಡಿ, ಬೆಳ್ಳುಳ್ಳಿ ಹಾನಿಗೀಡಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈಗ 2ನೇ ಹಂತದ ಬೆಳೆಗಳಾದ ಬಳ್ಳಿಶೇಂಗಾ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗಳೂ ಹಾಳಾಗಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಾರುಕಟ್ಟೆಯಲ್ಲೀಗ ಮೆಣಸಿನಕಾಯಿಗೆ ಉತ್ತಮ ಬೆಲೆಯಿದೆ. ಆದರೆ, ಅತಿಯಾದ ತೇವಾಂಶದಿಂದ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ರೈತರು ಮರುಗುವಂತಾಗಿದೆ. ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ 2171 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆಯಾಗಿದೆ. ಕಪ್ಪು ಮಣ್ಣಿನ ಪ್ರದೇಶಗಳಾದ ಲಕ್ಷ್ಮೇಶ್ವರ, ಯತ್ತಿನಹಳ್ಳಿ, ಮಾಡಳ್ಳಿ, ಯಳವತ್ತಿ, ಮಾಗಡಿ, ಗೊಜನೂರ, ರಾಮಗೇರಿ, ಬಸಾಪುರ, ಗೋವನಾಳ, ಶಿಗ್ಲಿ ಮತ್ತಿತರ ಕಡೆಗಳಲ್ಲಿ ಕಡ್ಡಿ, ಡಬ್ಬಿ ಮೆಣಸಿನಕಾಯಿ ಬೆಳೆಯಲಾಗಿದೆ.
ಪ್ರಾರಂಭದಲ್ಲಿ ಉತ್ತಮವಾಗಿಯೇ ಇದ್ದ ಮೆಣಸಿನ ಬೆಳೆ ನಂತರ ವಿಪರೀತ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಳವಾಗಿ ಹಳದಿ, ಮುಟುರು, ಬೇರು ಕೊಳೆರೋಗ ನಂತರ ಸಿಡಿ ರೋಗಕ್ಕೆ ತುತ್ತಾದವು. ಗಿಡದಲ್ಲಿ ಬಿಟ್ಟಿದ್ದ ನಾಲ್ಕಾರು ಕಾಯಿಗಳು ಒಣಗಿದ ಗಿಡದಲ್ಲಿಯೇ ಅರ್ಧಮರ್ಧ ಕೆಂಪು ಬಿಳಿಯಾಗಿವೆ. ಹೆಚ್ಚು ತೇವಾಂಶದಿಂದ ಹಣ್ಣಿನಲ್ಲಿ ನೀರು ತುಂಬಿ ನೆಲಕ್ಕುದುರಿದರೆ ಅಳಿದುಳಿದ ಕೆಲ ಕಾಯಿ ಕಾಡಿಗೆ ರೋಗಕ್ಕೆ ತುತ್ತಾಗಿದೆ. ಅಲ್ಲದೆ, ಜಮೀನಿನಲ್ಲಿ ಆಳೆತ್ತರ ಹುಲ್ಲು ಬೆಳೆದು ಮೆಣಸಿನಕಾಯಿ ನೆಲಕ್ಕೆ ಬಿದ್ದು ಇಲಿಗಳ ಪಾಲಾಗುತ್ತಿವೆ. ಉತ್ತಮ ದರವಿದೆ ಎಂದು ಮೆಣಸಿನಕಾಯಿ ಬಿಡಿಸಿದರೆ ಗುಣಮಟ್ಟ ಇಲ್ಲ ಎಂದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗುತ್ತದೆ. ಇದರಿಂದ ಬೆಳೆಗೆ ಮಾಡಿದ ಖರ್ಚು ಕೂಡ ವಾಪಸ್ ಬರದಂತಹ ಪರಿಸ್ಥಿತಿ ನಿರ್ವಣವಾಗಿದೆ. ಪ್ರತಿ ಎಕರೆಗೆ 3 ರಿಂದ 5 ಕ್ವಿಂಟಾಲ್ ಇಳುವರಿ ಬರುತ್ತಿದ್ದ ಮೆಣಸಿನಕಾಯಿ ಬೆಳೆ ಇದೀಗ ಬಹುತೇಕ ಹಾಳಾಗಿದೆ. ಇನ್ನು ಕೆಲವು ರೈತರು ಎಕರೆಗೆ 15/20 ಕೆಜಿ ಗುಣಮಟ್ಟದ್ದಲ್ಲದ ಬೆಳೆಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ವಾಣಿಜ್ಯ ಬೆಳೆ, ಕೆಂಪು ಬಂಗಾರ ಎಂದೇ ಕರೆಯುವ ಮೆಣಸಿನಕಾಯಿಗೆ ಅತಿವೃಷ್ಠಿಯಿಂದ ಬರ ಎದುರಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕಡ್ಡಿಗಾಯಿಗೆ 15,000 ರಿಂದ 20,000 ರೂ. ಮತ್ತು ಡಬ್ಬಿಗೆ 25,000-30,000 ರೂ. ಬೆಲೆ ಇದೆ. ಬೆಲೆ ಗಗನಕ್ಕೇರಿದ್ದು ಕಂಡು ಬೆಳೆ ಬಾರದ್ದರಿಂದ ರೈತ ಸಮುದಾಯ ಕೈ ಕೈ ಹಿಚುಕಿಕೊಳ್ಳುವಂತಾಗಿದೆ. ಆಶಾದಾಯಕವಾದ ಈ ಬೆಳೆ ಬಿತ್ತನೆ, ಸಸಿ ಬೆಳೆಸುವುದು, ನಾಟಿ ಮಾಡುವುದು, ಗೊಬ್ಬರ, ರಾಸಾಯನಿಕ ಸಿಂಪಡಣೆ ಸೇರಿ ಎಕರೆಗೆ ಕನಿಷ್ಠ 15-20 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದರೂ ಬೆಳೆ ಸಂಪೂರ್ಣ ಹಾಳಾಗಿದೆ.
ಸಾಲಸೊಲ ಮಾಡಿ ಬಿತ್ತನೆ ಮಾಡಿದ್ದ ಎಲ್ಲ ಬೆಳೆಗಳೂ ಅತಿಯಾದ ಮಳೆಗೆ ಕೊಳೆತು ಹೋಗಿವೆ. ಮೊದಲು ಬೆಳ್ಳುಳ್ಳಿ, ಉಳ್ಳಾಗಡ್ಡಿ, ಶೇಂಗಾ ಈಗ ಹತ್ತಿ, ಮೆಣಸಿನಕಾಯಿ ಬೆಳೆಯೂ ಹಾನಿಗೀಡಾಗಿವೆ. ಮುಂಗಾರು ಮಳೆಯಿಂದ ಕಸ ಹೆಚ್ಚಾಗಿ ಹಿಂಗಾರಿನ ಬಿತ್ತನೆಗೆ ಹಿನ್ನಡೆಯಾಗಿದೆ. ಈ ವರ್ಷ ಇದುವರೆಗೂ ಸರ್ಕಾರ ರೈತರಿಗೆ ಬೆಳೆ ಹಾನಿ, ಬೆಳೆ ವಿಮೆ ಪರಿಹಾರ ನೀಡಿಲ್ಲ. ಇದರಿಂದಾಗಿ ಕೃಷಿಯನ್ನೇ ನಂಬಿ ಬದುಕು ಸಾಗಿಸುವ ರೈತರ ಗೋಳು ಹೇಳತೀರದಾಗಿದೆ. | ಶಿವಾನಂದ ಲಿಂಗಶೆಟ್ಟಿ, ವಿಜಯೇಂದ್ರ ಬಂಡಿವಾಡ ರೈತರು
ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಕಡಿಮೆ ಮಳೆಗೆ ಉತ್ತಮ ಇಳುವರಿ ಬರುವ ಉಳ್ಳಾಗಡ್ಡಿ, ಬೆಳ್ಳುಳ್ಳಿ, ಮೆಣಸಿನಕಾಯಿ ಇತರೆ ತೋಟಗಾರಿಕೆ ಬೆಳೆಗಳು ಶೇ. 80ರಷ್ಟು ಕೊಳೆರೋಗಕ್ಕೆ ತುತ್ತಾಗಿವೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯವರು ಈಗಾಗಲೇ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಬೆಳೆ ಹಾನಿ ಪರಿಹಾರ ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ. | ಸುರೇಶ ಕುಂಬಾರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ