ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ದಿನಗಳೆದಂತೆ ಸುಡುಬಿಸಿಲಿನ ತಾಪ ಏರುತ್ತಲೇ ಇದ್ದು, ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಒಂದೆಡೆ ಕೃಷಿಕರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದು, ಇನ್ನೊಂದೆಡೆ ಬಿಸಿಯ ತಾಪಕ್ಕೆ ಬೆಳೆಗಳ ಇಳುವರಿ ಕಡಿಮೆಯಾಗಿದೆ. ಮಣ್ಣಿನಿಂದ ಮೇಲೇಳುವ ಬಿಸಿ ಗಾಳಿಯಿಂದ ಬೆಳೆ ಒಣಗುತ್ತಿದೆ. ಭೂಮಿಯೊಳಗೆ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಸಸ್ಯ ಸಂಕುಲದ ಮೇಲೂ ಇದು ಭಾರಿ ಪರಿಣಾಮ ಉಂಟುಮಾಡುತ್ತಿದೆ.
ಕರಾವಳಿಯ ಸಾಂಪ್ರದಾಯಿಕ ಬೆಳೆಗಳಾದ ಅಡಕೆ, ತೆಂಗು ಸಹಿತ ಪ್ರಮುಖ ಬೆಳೆಗಳು ಪದೇ ಪದೇ ಬದಲಾವಣೆಗೊಳ್ಳುವ ಹವಾಮಾನಕ್ಕೆ ಹೊಂದಿಕೊಳ್ಳುತ್ತಿಲ್ಲ. ಇದೇ ಕಾರಣದಿಂದ ಕೆಲವು ವರ್ಷಗಳಿಂದ ಶೇ.20ರಿಂದ 25ರಷ್ಟು ಇಳುವರಿ ಕಡಿಮೆಯಾಗಿದೆ. ಆದರೆ ಕರಾವಳಿ ಭಾಗದಲ್ಲಿ ಪ್ರತೀ ವರ್ಷವೂ ಗೇರುಬೀಜ ಬೆಳೆ ಮಾತ್ರ ಸ್ಥಿರವಾದ ಇಳುವರಿ ದೊರೆಯುತ್ತಿದೆ. ಬೆಳೆಗಳ ಮೇಲೆ ಹವಾಮಾನ ವೈಪರಿತ್ಯದ ಪರಿಣಾಮದ ಕುರಿತು ಅಧ್ಯಯನ ನಡೆಯುತ್ತಿದೆ.
ಒಂದೇ ಬೆಳೆಯ ಕೃಷಿಗೆ ಸೀಮಿತವಾದರೆ ಬೆಳೆ ಇಳುವರಿ ಕಡಿಮೆಯಾಗುತ್ತದೆ. ಹವಾಮಾನಕ್ಕೆ ತಕ್ಕಂತೆ ಕೃಷಿ ಬದಲಾಯಿಸುತ್ತಲೇ ಇದ್ದರೆ ಕೃಷಿಕರಿಗೆ ತುಸು ಲಾಭದಾಯಕವಾಗಬಹುದು. ಸರ್ವಋತು ಬೆಳೆ, ಸಾಂಬಾರ ಬೆಳೆಗಳನ್ನು ಬೆಳೆಯಬಹುದು. ಬಿಸಿಲು ತಡೆಗೆ ಗಿಡಗಳಿಗೆ ಹಾಗೂ ಮಣ್ಣಿಗೆ ಆಂಟಿ ಟ್ರಾನ್ಸ್‌ಪರೆಂಟ್ ಬಳಸಬಹುದಾಗಿದ್ದು, ಇದರಿಂದ ಗಿಡಗಳ ಮೇಲೆ ನೇರವಾಗಿ ಬಿಸಿಲು ಬೀಳುವುದನ್ನು ತಡೆಯಬಹುದು.
ಕೃಷಿ ಕಾರ್ಮಿಕರಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರ ವರೆಗೆ ಉರಿ ಬಿಸಿಲು ಇರುವ ಕಾರಣ ಕೆಲಸ ಮಾಡಲಾಗುತ್ತಿಲ್ಲ. ವಿಪರೀತ ಬೆವರು, ಹಾಗೂ ಮೈಯಲ್ಲಿ ಅಲರ್ಜಿ ಉಂಟಾಗುವುದು ಸಾಮಾನ್ಯವಾಗಿದೆ. ಇದರಿಂದ ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಿದರೆ ಅನುಕೂಲ. ಬಿಸಿಲಿನ ತಾಪ ಹೆಚ್ಚಿದಂತೆ ಸಸ್ಯ ಶಾರೀರಿಕ ಬೆಳವಣಿಗೆ ಹಿನ್ನಡೆಯಾಗುತ್ತದೆ. ಗಿಡಗಳ ಉಸಿರಾಟ ತೀವ್ರತೆ ಹೆಚ್ಚಾದಾಗ ಸಹಜವಾಗಿ ಫಸಲು ಕಡಿಮೆಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಗೋವಿಂದ ಪೂಜಾರಿ, ಸ್ಥಳೀಯ ಕೃಷಿ ಕಾರ್ಮಿಕ
ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಕೃಷಿಕರು ತೊಂದರೆ ಅನುಭವಿಸುವಂತಾಗಿದೆ. ಕೃಷಿಕರು ಮಣ್ಣಿನಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಬಿಸಿಲಿನ ತಡೆಗೆ ಗಿಡಗಳಿಗೆ ಹಾಗೂ ಮಣ್ಣಿಗೆ ಸೊಪ್ಪು ಹಾಕಬಹುದು ಅಥವಾ ತೇವಾಂಶ ಹಿಡಿದಿಟ್ಟುಕೊಳ್ಳುವ ವಿಧಾನ ಅಳವಡಿಸಿಕೊಳ್ಳಬಹುದು. ನಿಧಿಶ್ ಕೆ.ಜೆ., ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ, ಕುಂದಾಪುರ
*ಬಿಸಿಲಿನ ಪ್ರಕೋಪಕ್ಕೆ ಕೃಷಿ ಮುಂದುವರಿಸಲು ಹಿಂಜರಿಕೆ*ಕಂಗಾಲಾದ ರೈತ, ಇಳುವರಿಯಲ್ಲಿ ಭಾರಿ ವ್ಯತ್ಯಯ*ಗೇರು ಬೀಜ ಬೆಳೆಯಲ್ಲಿ ಸ್ಥಿರತೆ, ತೆಂಗು, ಅಡಕೆ ನಷ್ಟ*ಕೃಷಿಭೂಮಿಯಲ್ಲಿ ನೀರಿನ ಅಂಶ ಕಾಯ್ದುಕೊಳ್ಳಲು ವಿಜ್ಞಾನಿಗಳ ಸಲಹೆ