ಜಿಲ್ಲೆ

ಪೋಷಣೆಯಿಂದ ಕ್ಷಯ ರೋಗ ನಿಯಂತ್ರಣ ಜಾರ್ಖಂಡ್‌ನಲ್ಲಿ ನಡೆಸಿದ ಅಧ್ಯಯನದಿಂದ ಸಾಬೀತು

Mangaluru - Hariprasad Rai


ಮಂಗಳೂರು : ಉತ್ತಮ ಪೋಷಣೆಯ ಕ್ಷಯರೋಗ ನಿಯಂತ್ರಿಸುವುದು ಹಾಗೂ ಕ್ಷಯ ರೋಗಿಗಳ ಸಾವಿನ ಅಪಾಯವನ್ನು ಕಡಿಮೆಗೊಳಿಸಲು ಸಾಧ್ಯವಿದೆ. ಜಾರ್ಖಂಡಿನಲ್ಲಿ ಎರಡು ವರ್ಷ ನಡೆಸಿದ ಸಂಶೋಧನಾ ಅಧ್ಯಯನದಿಂದ ಇದು ಸಾಬೀತಾಗಿದೆ ಎಂದು ಡಾ. ಅನುರಾಗ್ ಭಾರ್ಗವ ಹಾಗೂ ಡಾ. ಮಾಧವಿ ಭಾರ್ಗವ ಅಭಿಪ್ರಾಯ ಪಟ್ಟಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಡಾ. ಮಾಧವಿ ಭಾರ್ಗವ ‘ಜಾರ್ಖಂಡ್‌ನ ನಾಲ್ಕು ಜಿಲ್ಲೆಗಳಲ್ಲಿ
ಕ್ಷಯರೋಗಕ್ಕೆ ತುತ್ತಾಗಿದ್ದ 2800 ಕುಟುಂಬಗಳನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. ಈ ಅವಧಿಯಲ್ಲಿ ಶೇ. 39ರಷ್ಟು ಪ್ರಕರಣಗಳು ಕಡಿಮೆಯಾಗಿರುವುದು ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಪ್ರಕರಣಗಳು ಶೇ. 50ರಷ್ಟು ಕಡಿಮೆಯಾಗಿರುವುದು ಕಂಡು ಬಂದಿದೆ ಎಂದರು.
ಅಧ್ಯಯನದ ಸಂದರ್ಭ ಮೂವರಲ್ಲಿ ಇಬ್ಬರು ಕ್ಷಯರೋಗಿಗಳಲ್ಲಿ ಅಪೌಷ್ಠಿಕತೆ ಕಂಡು ಬಂದಿತ್ತು. ಅಕ್ಕಿ, ಬೇಳೆಕಾಳು, ಹಾಲಿನ ಪೌಡರ್ ಒಳಗೊಂಡ ಆಹಾರ ಕಿಟ್ ಒದಗಿಸುವ ಮೂಲಕ ಕ್ಷಯ ರೋಗಿಗಳ ಅಪೌಷ್ಟಿಕತೆಯನ್ನು ಕಡಿಮೆ ಮಾಡಲಾಯಿತು. ಇದರಿಂದ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಅವರು ಹೇಳಿದರು.
ಡಾ. ಅನುರಾಗ್ ಭಾರ್ಗವ ಮಾತನಾಡಿ, ಭಾರತದಲ್ಲಿ 27 ಲಕ್ಷ ಜನರು ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿರುವುದಾಗಿ ಅಂದಾಜಿಸಲಾಗಿದೆ. ಅಪೌಷ್ಟಿಕತೆ, ಮಧುಮೇಹ, ಧೂಮಪಾನ ಹಾಗೂ ಮದ್ಯಪಾನ ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ ಸೋಂಕು ಸಕ್ರಿಯಗೊಳಿಸುವುದರಿಂದ ಸಾವಿನಂಚಿಗೆ ತಳ್ಳುತ್ತದೆ. ಇದಕ್ಕಾಗಿ ಉತ್ತಮ ಪೋಷಣೆ ಅಗತ್ಯತೆಯು ಸಂಶೋಧನೆಯ ವೇಳೆ ಕಂಡುಬಂದಿದೆ ಎಂದರು.
ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಟ್ಯೂಬರ್ಕ್ಯುಲೋಶಿಸ್ ರಿಸರ್ಚ್ ಸೆಂಟರ್‌ನ ನೇತೃತ್ವದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಈ ಅಧ್ಯಯನ ನಡೆಸಲಾಗಿದೆ. ಜಾರ್ಖಂಡ್‌ನಲ್ಲಿ ಕ್ಷಯರೋಗ ಹಾಗೂ ಅಪೌಷ್ಟಿಕತೆ ಅಧಿಕ ಪ್ರಮಾಣದಲ್ಲಿರುವ ಕಾರಣ ಅಲ್ಲಿನ ನಾಲ್ಕು ಜಿಲ್ಲೆಗಳನ್ನು ಈ ಅಧ್ಯಯನಕ್ಕಾಗಿ ಆಯ್ಕೆ ಮಾಡಲಾಗಿತ್ತು ಎಂದು ಡಾ. ಅಕ್ಷಯ್ ಮಾಹಿತಿ ನೀಡಿದರು.