ಬೆಂಗಳೂರು:ರಾಜ್ಯದ ಹಲವೆಡೆ ಸುರಿಯುತ್ತಿರುವ ಮುಳೆ ಮುಂದಿನ 4 ದಿನ ಮುಂದುವರಿಯಲಿದೆ. ದಕ್ಷಿಣ ಕನ್ನಡದ ಮಂಗಳೂರು, ಕೊಡಗಿನ ಗೋಣಿಕೊಪ್ಪ, ಶಿವಮೊಗ್ಗದ ಆಗುಂಬೆ, ಯಾದಗಿರಿಯ ಕವಡಿಮಟ್ಟಿ, ಚಾಮರಾಜನಗರದ ಹರದನಹಳ್ಳಿ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಶನಿವಾರ (ಮೇ 25) ಭಾರಿ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಘೋಷಣೆ. ಉಳಿದ ಜಿಲ್ಲೆಗಳಲ್ಲಿ ಮುಂದಿನ 4 ದಿನ ಗುಡುಗು ಮಿಂಚು ಸಹಿತ ಸಾಧಾರಣ ಮಳೆ ಬೀಳಲಿದೆ.
ಬಂಗಾಳಕೊಲ್ಲಿಯ ಮಧ್ಯಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮೇ 25ರ ಬೆಳಗ್ಗೆ "ರೆಮಲ್' ಚಂಡಮಾರುತವಾಗಿ ರೂಪುಗೊಳ್ಳಲಿದೆ. ಬಾಂಗ್ಲಾದೇಶ, ಪಶ್ಚಿಮ ಬಂಗಾಳದ ಕರಾವಳಿ ಭಾಗಕ್ಕೆ ಮೇ 26ರ ಮಧ್ಯರಾತ್ರಿ ಸೈಕ್ಲೋನ್ ಅಪ್ಪಳಿಸಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ಮೇ 19ರಿಂದ ಆರಂಭವಾಗಿರುವ ನೈಋತ್ಯ ಮಾನ್ಸೂನ್ ಇನ್ನಷ್ಟು ಮುನ್ನಡೆಯಲು ಪರಿಸ್ಥಿತಿ ಅನುಕೂಲವಾಗಿದೆ. ಅಂಡಮಾನ್ ಸಮುದ್ರ ಮತ್ತು ಬಂಗಾಳಕೊಲ್ಲಿಯ ಮಧ್ಯ ಭಾಗದಲ್ಲಿ ಸದ್ಯ ಮಾರುತಗಳಿದ್ದು, ಇನ್ನಷ್ಟು ವ್ಯಾಪಿಸಲು ಪೂರಕ ವಾತಾವರಣ ನಿರ್ಮಾಣವಾಗಿದೆ.