ಜಿಲ್ಲೆ

ಹಳದಿ ಮಾರ್ಗಕ್ಕೆ ಆಗಸ್ಟ್​ನಲ್ಲಿ ಪ್ರಧಾನಿ ಚಾಲನೆ

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ನಮ್ಮ ಮೆಟ್ರೋದ ಚಾಲಕರಹಿತ ಹಳದಿ ಮಾರ್ಗಕ್ಕೆ ಆಗಸ್ಟ್​ನಲ್ಲಿ ಚಾಲನೆ ಸಿಗುವುದು ಬಹುತೇಕ ಖಚಿತಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ತಿಳಿಸಿದೆ.

ಜು.22ಕ್ಕೆ ಸಿಎಂಎಸ್​ಆರ್​ ಆಯುಕ್ತರು ಅಂತಿಮ ಪರಿಶೀಲನೆ ನಡೆಸಲಿದ್ದು, ಈಗಾಗಲೆ ಇಂಡಿಪೆಂಡೆಂಟ್​ ಸೇಫ್ಟಿ ಅಸೆಸ್ಸರ್​ (ಐಎಸ್​ಎ) ಎಲ್ಲ ದಾಖಲೆ, ಅಂಕಿ&ಅಂಶವನ್ನು ಪರಿಶೀಲಿಸಿದ ಬಳಿಕ ಪ್ರಮಾಣ ಪತ್ರವನ್ನು ರೈಲ್ವೆಯ ಮೆಟ್ರೋ ರೈಲು ಸುರಕ್ಷಣಾ ಆಯೋಗಕ್ಕೆ ನೀಡಲಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ಹಾಗೂ ದಾಖಲೀಕರಣಕ್ಕೋಸ್ಕರ ಸಾಕ್ಷ ಚಿತ್ರೀಕರಣಕ್ಕೆ ಬಿಎಂಆರ್​ಸಿಎಲ್​ ಮುಂದಾಗಿದ್ದು, ಆಗಸ್ಟ್​ ಮೊದನೇ ಅಥವಾ ಎರಡನೇ ವಾರದಲ್ಲಿ ಚಿತ್ರೀಕರಣಗಳು ನಡೆಯಲಿದೆ.

ಬಸವನಗುಡಿಯ ರಾಷ್ಟ್ರೀಯ ವಿದ್ಯಾಲಯ ರಸ್ತೆ ನಿಲ್ದಾಣದಿಂದ ಪ್ರಾರಂಭವಾಗಿ ಸಿಲ್ಕ್​ಬೋರ್ಡ್​, ಜಯದೇವ ಆಸ್ಪತ್ರೆ ಪ್ರಮುಖ ಕೇಂದ್ರಗಳ ಮೂಲಕ ಬೊಮ್ಮಸಂದ್ರವರೆಗೆ ಸಂಪರ್ಕ ಬೆಳೆಯಲಿದೆ.

ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಕಾರ್ಯಾಚರಿಸಲಿದ್ದು, ಸುಮಾರು 19.15 ಕಿಮೀ ಉದ್ದವನ್ನು ಹೊಂದಿದೆ. ಬೊಮ್ಮಸಂದ್ರ, ಹೆಬ್ಬಗೋಡಿ, ಇನ್ಫೊಸಿಸ್​ ಫೌಂಡೇಶನ್​ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ಸ್​ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್​, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್​ ಸಿಲ್ಕ್​ಬೋರ್ಡ್​, ಬಿಟಿಎಂ ಲೇಔಟ್​, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್​.ವಿ. ರಸ್ತೆ ನಿಲ್ದಾಣವರೆಗೆ ಕಾರ್ಯಚರಿಸಲಿದೆ. ಜಯನಗರದ ಆರ್​.ವಿ. ರೋಡ್​ನಿಂದ, ಬೊಮ್ಮಸಂದ್ರದವರೆಗೆ 3 ಇಂಟರ್​ ಚೇಂಜ್​ (ಸಿಲ್ಕ್​ಬೋರ್ಡ್​, ಆರ್​.ವಿ.ರೋಡ್​, ಜಯದೇವ ಆಸ್ಪತ್ರೆ) ನಿಲ್ದಾಣಗಳೊಂದಿಗೆ, ಒಟ್ಟು 16 ನಿಲ್ದಾಣಗಳನ್ನು ಒಳಗೊಂಡಿದೆ. ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಪ್ರತಿನಿತ್ಯ ಸುಮಾರು 2.6 ಲ ಪ್ರಯಾಣಿಕರು ಈ ಮಾರ್ಗವಾಗಿ ಸಂಚರಿಸುವ ಸಾಧ್ಯತೆಗಳಿವೆ.