ಜಿಲ್ಲೆ

ಹೆಸರು ಬೆಳೆಗೆ ಹಳದಿ ರೋಗ

ಶಿರಹಟ್ಟಿ: ಸಕಾಲಕ್ಕೆ ಮುಂಗಾರು ಮಳೆ ಬಾರದಿದ್ದರಿಂದ ಬಹುತೇಕ ರೈತರು ಹೆಸರು ಬಿತ್ತನೆಗೆ ಹಿಂದೇಟು ಹಾಕಿದ್ದರು. ಆದಾಗ್ಯೂ ಅಲ್ಪಸ್ವಲ್ಪ ವರುಣ ದೇವ ಕೃಪೆ ತೋರಿದ್ದರಿಂದ ಕೆಲ ರೈತರು ಹೆಸರು ಬಿತ್ತನೆ ಮಾಡಿದ್ದರು.

ಆಗಾಗ ಸುರಿಯುವ ಜಿಟಿಜಿಟಿ ಮಳೆಯಿಂದಾಗಿ ಹೆಸರು ಬೆಳೆಗೆ ಹಳದಿ ರೋಗ ಬಾಧೆ ಕಾಣಿಸಿಕೊಂಡಿದೆ. ಇದರಿಂದ ರೈತರಲ್ಲಿ ಆತಂಕ ಮೂಡಿದೆ.
ಮಾಹಿತಿ ತಿಳಿದ ಕೃಷಿ ಸಹಾಯಕ ನಿರ್ದೇಶಕ ರೇವಣೆಪ್ಪ ಮನಗೂಳಿ ಅವರು ತಾಲೂಕಿನ ಮಾಗಡಿ ಗ್ರಾಮದ ನಾಗಪ್ಪ ಗಾಣಿಗೇರ ಎಂಬುವರ ಹೊಲಕ್ಕೆ ಗುರುವಾರ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.

‘ಹೆಸರು ಬಳ್ಳಿಯ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತಿದ್ದು ಆರಂಭದಲ್ಲಿಯೇ ಹತೋಟಿ ಕ್ರಮಕ್ಕೆ ಮುಂದಾದರೆ ಬೆಳೆ ರಕ್ಷಣೆ ಸಾಧ್ಯ. ಈ ಬಾರಿ ಮಳೆ ಕೊರತೆಯಿಂದ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಸದ್ಯ ಹೆಸರು ಬೆಳೆಯಲ್ಲಿ ಹಳದಿ ನಂಜು ರೋಗ ಕಂಡು ಬಂದಿದ್ದರಿಂದ ಹತೋಟಿಗೆ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.

ಹತೋಟಿ ಕ್ರಮ

ಮೊದಲಿಗೆ ರೋಗ ತಗುಲಿದ ಸಸಿಯನ್ನು ಕಿತ್ತು ಮಣ್ಣಿನಲ್ಲಿ ಮುಚ್ಚಬೇಕು. ಬಳಿಕ ಡೆಮಿಥೋಲ್ ಶೇ.0.03, ಮೊನೋಕ್ರೊಟೊಪಾಸ್ ಶೇ. 1.6, ಟ್ರೆಜೋಪಾಸ್ 1.25 ಮಿ.ಲೀ. ಹಾಗೂ ಮೀಥೈಲ್ ಡೆಮಿಟೋನ್ 2 ಮಿ.ಲೀ. ರಾಸಾಯನಿಕ ಔಷಧಗಳನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಣೆ ಮಾಡಲು ಸಲಹೆ ನೀಡಿದರು.

ಸಹಾಯಕ ಕೃಷಿ ಅಧಿಕಾರಿ ರಮೇಶ ಲಮಾಣಿ, ರೈತ ನಾಗಪ್ಪ ಗಾಣಿಗೇರ, ತಾಲೂಕು ರೈತ ಸಂಘದ ಅಧ್ಯಕ್ಷ ರಮೇಶ ಕೋಳಿವಾಡ, ಚೆನ್ನಪ್ಪ ಷಣ್ಮುಖಿ, ಚಂದ್ರಪ್ಪ ಹೊಸಮನಿ, ಈರಣ್ಣ ಅಣ್ಣಿಗೇರಿ, ಬಸವರಾಜ ಮಟ್ಟಿ ಇತರರಿದ್ದರು.