ಯಳಂದೂರು: ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳು ತಳಮಟ್ಟದಲ್ಲಿ ಪಕ್ಷ ಸಂಘಟನೆಯ ಜತೆಗೆ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡುವ ಮೂಲಕ ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.
ಭಾನುವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಯಳಂದೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಸಮರ್ಥವಾಗಿ ನಿಂತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ಜನಮನ್ನಣೆ ಗಳಿಸಿದೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯು ಕಾಪಿ ಮಾಡುತ್ತಿದೆ. ಆದರೆ ಯೋಜನೆಯ ಸಮಿತಿಗಳಿಗೆ ನಮ್ಮ ಪಕ್ಷದ ಕಾರ್ಯಕರ್ತರನ್ನು ನೇಮಿಸಿಕೊಳ್ಳುವುದನ್ನು ವಿರೋಧಿಸುತ್ತಿದ್ದಾರೆ. ಆದರೆ ದೇಶದ ಪ್ರಧಾನ ಮಂತ್ರಿಗಳೇ ಆರ್‌ಎಸ್‌ಎಸ್ ನವರನ್ನು ತಮ್ಮ ಜಂಟಿ ಕಾರ್ಯದರ್ಶಿಗಳಾಗಿ ನೇಮಿಸಿಕೊಂಡಿರುವುದು ಅಸಂವಿಧಾನಿಕ ನಡೆಯಾಗಿದೆ ಎಂದರು.
ಈ ಬಾರಿ ನಾನು ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದೇನೆ. ಪಕ್ಷದ ಕಾರ್ಯಕರ್ತರೂ ನನ್ನ ಜತೆಯಲ್ಲಿದ್ದಾರೆ. ನಾನು ಎಲ್ಲರಿಗೂ ಕೂಡ ಕೆಲಸಗಳನ್ನು ಹಂಚಿದ್ದೇನೆ. ಇದರಲ್ಲಿ ಜಾತಿ, ಧರ್ಮದ ತಾರತಮ್ಯ ಮಾಡಿಲ್ಲ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಧಿಕಾರಿಗಳಲ್ಲೂ ನಾನು ಜಾತಿ, ಧರ್ಮ ತಂದಿಲ್ಲ. ಎಲ್ಲರಿಗೂ ಸಮಾನ ಮನಸ್ಸಿನಿಂದ ಕಾಣುವ ಗುಣ ನನ್ನದಾಗಿದೆ. ಮುಂಬರುವ ಜಿಪಂ, ತಾಪಂ, ನಗರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲೂ ಸಹ ನಾನು ಟಿಕೆಟ್ ನೀಡುವ ವಿಚಾರದಲ್ಲಿ ಇದೇ ಮಾನದಂಡವನ್ನು ಅನುಸರಿಸುತ್ತೇನೆ. ಪಕ್ಷಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳು, ಯುವಕರಾಗಿದ್ದು ಎಲ್ಲರೂ ಸಂಘಟಿತರಾಗಿ ಪಕ್ಷ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ನಾನು ನೀಡುತ್ತೇನೆ ಎಂದರು.
ಜಿಲ್ಲೆ ಹಾಗೂ ತಾಲೂಕು ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಗ್ಯಾರಂಟಿ ಯೋಜನೆ ಪ್ರಾಧಿಕಾರ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಯೋಗೇಂದ್ರ, ಸೈಯದ್, ಪಪಂ ಅಧ್ಯಕ್ಷೆ ಲಕ್ಷ್ಮೀಮಲ್ಲು, ಸದಸ್ಯರಾದ ವೈ.ಜಿ.ರಂಗನಾಥ, ಬಿ.ರವಿ, ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ ಮುನವ್ವರ್ ಬೇಗ್, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಬಿಳಿಗಿರಿರಂಗನಾಥ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ವಿಜನ್, ಚಾಮುಲ್ ನಿರ್ದೇಶಕ ಕಮರವಾಡಿ ಮುಖಂಡರಾದ ರೇವಣ್ಣ, ವಿಷ್ಣುಕುಮಾರ್, ವಡಗೆರೆದಾಸ್, ಕಂದಹಳ್ಳಿ ನಂಜುಂಡಸ್ವಾಮಿ, ಲೋಕೇಶ್, ಚೇತನ್ ದೊರೈರಾಜ್, ಮೋಹನ್ ರಘು, ಹುಸೇನ್, ಕೃಷ್ಣಾಪುರ ದೇವರಾಜು, ಗೀತಾ, ಭಾಗ್ಯಮ್ಮ, ಸುಮಿತ್ರಾ, ಚೇತನ್ ಇದ್ದರು.