ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ತಾಲೂಕು ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್ ಉದ್ಘಾಟಿಸಿದರು. ಪ್ರಾಚಾರ್ಯೆ ಚಂದ್ರಕಲಾ ಪ್ರಕಾಶ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಕಟ್ಟುಪಾಡುಗಳ ನಡುವೆ ಮಹಿಳೆ ಸಾಧನೆ- ಸ.ನೌ.ಸಂ.ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್ ಅಭಿಮತ

ಯಲಬುರ್ಗಾ: ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ಮುಖ್ಯವಾಗಿದೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದಿಂದ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ತಾಲೂಕು ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈಯಕ್ತಿಕವಾಗಿ ಮನೆಯ ಅರ್ಧ ಜವಾಬ್ದಾರಿ ಹೊರುವ ಮಹಿಳೆ ಒಬ್ಬ ಶಿಕ್ಷಕಿಯಾಗಿ, ಇಂಜಿನಿಯರ್, ಪೈಲೆಟ್ ಆಗಿಯೂ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಇಂದಿನ ದಿನಗಳಲ್ಲಿ ಆಕೆ ಸಾಧನೆಯ ಶಿಖರ ಏರುತ್ತಿದ್ದಾಳೆ ಎಂದರು.

ಸಿಂಧನೂರಿನ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆ ಪ್ರಾಚಾರ್ಯೆ ಚಂದ್ರಕಲಾ ಪ್ರಕಾಶ ಉಪನ್ಯಾಸ ನೀಡಿ, ಸಮಾನತೆ ಜತೆಗೆ ಒಗ್ಗಟ್ಟಿನಲ್ಲಿ ಮಹಿಳೆಯರು ಸದಾ ಮುಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ. ಮಹಿಳೆಯರ ಸಾಧನೆಗೆ ಮನಃಪೂರ್ವಕ ಗೌರವ ಸೂಚಿಸುವ ದಿನ ಇದಾಗಿದೆ. ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿಯೂ ಅವಕಾಶ ಕೊಡುವುದು ಮುಂದಿನ ಮಹತ್ತರ ಬೆಳವಣಿಗೆಗೆ ದಾರಿದೀಪವಾಗಲಿದೆ. ಪ್ರಮುಖವಾಗಿ ತಾಂತ್ರಿಕ, ಸಂಶೋಧನಾ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ಧಂಗಪ್ಪ ಶ್ಯಾಗೋಟಿ, ನಿವೃತ್ತ ಡಿಡಿಪಿಐ ಶಂಕ್ರಪ್ಪ ಗಾಂಜಿ, ಬಿಸಿಎಂ ತಾಲೂಕು ಅಧಿಕಾರಿ ಶಿವಶಂಕರ ಕರಡಕಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ಪ್ರಮುಖರಾದ ಕೆ.ಎಚ್.ಛತ್ರದ, ಮಹೇಶ ಸಬರದ, ಬಸವರಾಜ ಮಾಸ್ತಿ, ಎಸ್.ವಿ.ಧರಣಾ ಇತರರಿದ್ದರು.