ಜಿಲ್ಲೆ

ಪ್ರಗತಿ ವರದಿ ನೈಜತೆಯಿಂದ ಕೂಡಿರಲಿ

ಯಲಬುರ್ಗಾ: ಶಿಕ್ಷಣ ಇಲಾಖೆ, ವಸತಿ ನಿಲಯಗಳ ಮೂಲ ಸೌಕರ್ಯ ಹಾಗೂ ಭೌತಿಕ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸುವ ಪ್ರಗತಿ ವರದಿ ನೈಜತೆಯಿಂದ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ ಅಮರಗಟ್ಟಿ ಹೇಳಿದರು.

ತಾಲೂಕಿನ ಕುಡಗುಂಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ, ತಾಪಂ, ಜಿಪಂ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.

ಶಾಲಾ ಕಾಲೇಜು ಹಂತದಲ್ಲಿನ ಮೂಲ ಸೌಕರ್ಯಗಳ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಶೈಕ್ಷಣಿಕ ಮಟ್ಟ ಕುಸಿಯಲಾರಂಭಿಸಿದೆ ಎಂಬುದು ಇಲಾಖೆಯ ವರದಿಯಿಂದ ತಿಳಿದಿದೆ. ಆದ ಕಾರಣ ಶಿಕ್ಷಕರು ಭೌತಿಕ ಅಂಶಗಳ ಜತೆಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ಗ್ರಾಪಂ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಪಿಡಿಒ ವೆಂಕಟೇಶ ನಾಯ್ಕ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುತ್ತಾ ಬರಲಾಗಿದೆ. ಕುದ್ರಿಕೊಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಚಿಕ್ಕಮ್ಯಾಗೇರಿ ಬಾಲಕಿಯರ ಸಹಿಪ್ರಾ ಶಾಲೆ ಹಾಗೂ ತಾಂಡಾ ಶಾಲೆಗೆ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣವಾಗಬೇಕಿದೆ ಎಂದರು.

ಗ್ರಾಪಂ ಸದಸ್ಯರಾದ ದೇವಪ್ಪ ಲಗಳೂರ, ಶರಣಪ್ಪ ಹಾದಿಮನಿ, ಫಾತೀಮಾ ಬೇಗಂ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಹೊಸ್ಮನಿ, ವಿಸ್ತಾರ ಸಂಸ್ಥೆಯ ತಾಲೂಕು ಸಂಯೋಜಕ ಬಸವರಾಜ ಬಳಗೇರಿ, ಅಂಗನವಾಡಿ ಮೇಲ್ವಿಚಾರಕಿ ರಾಜೇಶ್ವರಿ ರಡ್ಡೇರ, ಮುಖ್ಯಶಿಕ್ಷಕರಾದ ಶರಣಪ್ಪ ಇಟಗಿ, ವೈ.ಜಿ.ಪಾಟೀಲ್, ಅರುಣಕುಮಾರ ಸಾಲಿಮಠ, ಬಸವಣ್ಣೆಮ್ಮ ಸಿಂದೋಗಿ, ಶಿಕ್ಷಕರಾದ ನಿಂಗಪ್ಪ, ಗುಂಡಪ್ಪ ಅಸೂಟಿ, ಡಿ.ವೈ.ಮುಜಾವರ, ಸುನೀಲ್ ಕುಮಾರ್, ಕಲ್ಲಯ್ಯ ಹಿರೇಮಠ, ವಿಆರ್‌ಡಬ್ಲ್ಯು ಕಾಳೇಶ ಕಮ್ಮಾರ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ದೀಪಾ ಬಿಸೆರೊಟ್ಟಿ, ಅರುಣ ಸಂಗಟಿ, ವಿನೋದ ಅರಟ್ಟಿ, ರಿಯಾಜ್ ನಧಾಪ್, ಅಕ್ಷತಾ ರಾವಣಕಿ, ನಿವೇದಿತಾ ಬಳಗೇರಿ,, ಪ್ರೀತಮ್ ರಾಠೋಡ, ಆಕಾಶ ಛಲವಾದಿ ಇತರರಿದ್ದರು.