ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಜಮೀನಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಸಮುದಾಯ ಬದು ನಿರ್ಮಾಣ ಕಾಮಗಾರಿಯ ಕೊನೆ ದಿನ ಮಹಿಳಾ ಕಾರ್ಮಿಕರು ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು. 
ಜಿಲ್ಲೆ

ಮಳೆಗಾಗಿ ಕಾರ್ಮಿಕರಿಂದ ಪ್ರಾರ್ಥನೆ

ಶ್ರೀನಾಥ

ಯಲಬುರ್ಗಾ: ತಾಲೂಕಿನ ಕರಮುಡಿ ಗ್ರಾಮದ ನರೇಗಾ ಕೂಲಿಕಾರರು ಕಾಮಗಾರಿ ಸ್ಥಳದಲ್ಲಿ ಈಶ್ವರ ಹಾಗೂ ಬಸವಣ್ಣನ ಮಣ್ಣಿನ ಮೂರ್ತಿಗೆ ಪೂಜೆ ಸಲ್ಲಿಸಿ ಮಳೆರಾಯನ ಕೃಪೆಗಾಗಿ ಬೇಡಿಕೊಂಡರು.

ನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಬದು ನಿರ್ಮಾಣ ಕಾಮಗಾರಿ ಕೊನೆ ದಿನವಾದ ಗುರುವಾರ ಕಾಮಗಾರಿ ಸ್ಥಳದಲ್ಲಿ ಪೂಜೆ ಸಲ್ಲಿಸಿ, ಭಕ್ತಿ ಮೆರೆದರು.

ಮಹಿಳಾ ಕಾರ್ಮಿಕರಾದ ಶರಣವ್ವ ಬೆಟಗೇರಿ ಅವರ ತಂಡ ದೇವರ ಹಾಡು ಹಾಗೂ ಜಾನಪದ ಹಾಡುಗಳನ್ನು ಹಾಡಿ ಗಮನ ಸೆಳೆಯಿತು. ಕಳೆದೊಂದು ತಿಂಗಳಿಂದ ಮಳೆ ಬಂದಿಲ್ಲ. ಇದರಿಂದ ಬಿತ್ತಿದ ಬೆಳೆಗೆ ನೀರಿನ ಕೊರತೆ ಎದುರಾಗಿದೆ.

ಹೀಗಾಗಿ ಮಳೆಗಾಗಿ ಪ್ರಾರ್ಥಿಸಿ ಪೂಜಾ ಕೈಂಕರ್ಯ ಮಾಡಲಾಯಿತು. ಕೂಲಿ ಕಾರ್ಮಿಕರಿಗೆ ಜಮೀನಿನ ಮಾಲೀಕರು ಉಪಾಹಾರದ ವ್ಯವಸ್ಥೆ ಮಾಡಿದ್ದರು.

ಕರಮುಡಿ ಗ್ರಾಮದಲ್ಲಿ ಪ್ರತಿದಿನ ಎಂಟು ತಂಡಗಳಂತೆ ಕಾರ್ಮಿಕರು ನಿರಂತರ ಕೆಲಸ ಮಾಡುತ್ತಿದ್ದು, ಪ್ರತಿದಿನ 500 ಕ್ಕೂ ಹೆಚ್ಚು ಅಕುಶಲ ಕೂಲಿಕಾರರು ರೈತರ ಜಮೀನುಗಳಿಗೆ ಕಂದಕ ಬದುಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದರಲ್ಲಿ ಮಳೆನೀರು ಸಂಗ್ರಹಗೊಂಡು ತೇವಾಂಶ ಹೆಚ್ಚಾಗಲು ಅನುಕೂಲವಾಗಲಿದೆ. ಮಣ್ಣಿನ ಸವಕಳಿ ತಪ್ಪಿದ್ದು, ಭೂಮಿ ಸಮತಟ್ಟಾಗುತ್ತಿವೆ ಎಂದು ರೈತರು ಅಭಿಪ್ರಾಯಪಟ್ಟರು.

ಕಾಯಕ ಬಂಧುಗಳಾದ ಮಂಜುನಾಥ ಬೆಟಗೇರಿ ಹಾಗೂ ರಮೇಶ ನಿಡಗುಂದಿ, ಮಹಾಂತೇಶ ಹೊಸಮನಿ, ನಾಗಪ್ಪ, ಶರಣವ್ವ, ಸುಮಂಗಲ ಹಾಗೂ ಕೂಲಿಕಾರರು ಇದ್ದರು.