ಯಲಬುರ್ಗಾ; ಮಾದಕ ವಸ್ತುಗಳ ಸೇವನೆ ಯುವ ಸಮಾಜಕ್ಕೆ ಅಂಟಿದ ದೊಡ್ಡ ಪಿಡುಗು. ಮಾದಕ ಪದಾರ್ಥಗಳ ಸೇವನೆಯು ಹತ್ತಿರದ ಸ್ನೇಹಿತರ ಪ್ರಚೋದನೆಯಿಂದ ಆರಂಭವಾಗಿ ನಂತರ ಚಟವಾಗಿ ಪರಿಣಮಿಸುತ್ತದೆ ಎಂದು ಆಯುಷ್ಮಾನ್ ಇಲಾಖೆ ವೈದ್ಯಾಧಿಕಾರಿ ವಿವೇಕ್ ವಾಗಲೆ ಹೇಳಿದರು.
ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಪೊಲೀಸ್ ಇಲಾಖೆ ಹಾಗೂ ಆಯುಷ್ಮಾನ್ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ, ಅಕ್ರಮ ಸಾಗಣೆ ವಿರುದ್ಧ ಜನಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾದಕ ಪದಾರ್ಥಗಳ ಸೇವನೆಯಿಂದ ಅಲ್ಪಾವಧಿ ಮತ್ತು ದೀರ್ಘಾವಧಿ ಅನಾರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ. ಉತ್ತಮ ಜೀವನ ಶೈಲಿಯನ್ನು ಆಯ್ದುಕೊಳ್ಳಬೇಕು, ಮಾದಕ ಪದಾರ್ಥಗಳನ್ನು ಅಲ್ಲ ಎಂಬುದನ್ನು ಅರಿಯಬೇಕು.
ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವುಗಳು ಮಾದಕ ದ್ರವ್ಯ, ವಸ್ತುಗಳ ದುಷ್ಪರಿಣಾಮಗಳ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಹಕರಿಸಬೇಕು.
ಬದಲಾದ ಜೀವನ ಶೈಲಿಯಿಂದ ಯುವಕರಲ್ಲಿ ಮಾದಕ ದ್ರವ್ಯ ವ್ಯಸನಿಗಳ ಸಂಖ್ಯೆ ಗಣನೀಯ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು.
ಪಿಎಸ್‌ಐ ವಿಜಯ ಪ್ರತಾಪ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಯುವಕರು ಇಂಥ ವಸ್ತುಗಳಿಂದ ದೂರವಿದ್ದು, ಉತ್ತಮ ಗುರಿಯತ್ತ ಸಾಗಬೇಕು ಎಂದರು.
ಪಿಎಸ್‌ಐ ಗುಲಾಮ ಅಹಮದ್ ಖಾಜಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಜ್ಞಾಪಕ ಶಕ್ತಿ, ಮಾನಸಿಕ ಗೊಂದಲ, ದೃಢ ನಿರ್ಧಾರವಿಲ್ಲದೆ ಬದುಕನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಈ ನಿಟ್ಟಿನಲ್ಲಿ ಕಾಲೇಜು ಆವರಣ ಮತ್ತು ಸುತ್ತಲು ಇಂಥ ಕೃತ್ಯದಲ್ಲಿ ತೊಡಗುವ ವ್ಯಕ್ತಿಗಳ ಬಗ್ಗೆ ಯುವಕರು ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು. ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ರವೀಂದ್ರ, ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.