ಯಲಬುರ್ಗಾ ಪಪಂವತಿಯಿಂದ ಅನಧಿಕೃತ ಡಬ್ಬಿ ಅಂಗಡಿ ಹಾಗೂ ಶೆಡ್‌ಗಳನ್ನು ತೆರವುಗೊಳಿಸಲು ಮುಂದಾದ ಪಪಂ ಮುಖ್ಯಾಧಿಕಾರಿ ಹಾಗೂ ಅಂಗಡಿಕಾರರ ಮಧ್ಯೆ ಮಾತಿನ ಜಟಾಪಟಿ ನಡೆಯಿತು.  
ಜಿಲ್ಲೆ

ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ ಕ್ರಮ, ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿಕೆ

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ಪಂವತಿಯಿಂದ ರಸ್ತೆಗಳ ಎರಡೂ ಬದಿಯಲ್ಲಿ ನಿರ್ಮಾಣ ಮಾಡಿದ ಚರಂಡಿಗಳ ಮೇಲೆ ಅನಧಿಕೃತ ಡಬ್ಬಿ ಅಂಗಡಿ ಹಾಗೂ ಶೆಡ್‌ಗಳನ್ನು ತೆರವುಗೊಳಿಸಲು ಮುಂದಾದಾಗ ಪಪಂ ಮುಖ್ಯಾಧಿಕಾರಿ ನಾಗೇಶ ಹಾಗೂ ಅಂಗಡಿಕಾರರ ಮಧ್ಯೆ ಮಂಗಳವಾರ ಮಾತಿನ ಜಟಾಪಟಿ ನಡೆಯಿತು.

ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ವಾಹನ ಸವಾರರ ಸುಗಮ ಸಂಚಾರದ ದೃಷ್ಟಿಯಿಂದ ಪಾದಚಾರಿ ರಸ್ತೆಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವುದಕ್ಕೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಅತಿಕ್ರಮಣ ಮಾಡಿಕೊಂಡವರಿಗೆ ನೋಟಿಸ್ ಜಾರಿ ಮಾಡುವ ಅವಶ್ಯಕತೆ ಇಲ್ಲವಾದರೂ ಮೌಖಿಕವಾಗಿ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗಿದೆ. ರಸ್ತೆ ಸುರಕ್ಷತಾ ಕಾಯ್ದೆ ಪಾಲನೆ ದೃಷ್ಟಿಯಿಂದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವ ವಿಷಯದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ.

ಪಟ್ಟಣದ ಟಿಪ್ಪು ಸುಲ್ತಾನ ವೃತ, ಕನಕದಾಸ ವೃತ್ತ, ಅಪ್ಪು ವೃತ್ತ, ಚನ್ನಮ್ಮ ವೃತ್ತ, ಮುಧೋಳ ರಸ್ತೆಯ ಸಿದ್ಧರಾಮೇಶ್ವರ ಕಾಲನಿ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಭವನದವರಿಗೆ ಅನಧಿಕೃತ ಅಂಗಡಿಗಳನ್ನು ಗುರುತಿಸಲಾಗಿದ್ದು ಶೀಘ್ರದಲ್ಲಿಯೇ ತೆರವು ಕಾರ್ಯಾಚರಣೆ ನಡೆಸಲಾಗುವುದು. ಅಡ್ಡಿಪಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ನಿಗದಿಪಡಿಸಿದ ಅವಧಿಯಲ್ಲಿ ಅಂಗಡಿಗಳನ್ನು ತೆರವುಗೊಳಿಸದಿದ್ದರೆ ಪಂಚಾಯತಿಯಿಂದಲೇ ತೆರವುಗೊಳಿಸಿ, ತೆರವಿಗೆ ತಗುಲಿದ ವೆಚ್ಚವನ್ನು ಅಂಗಡಿಕಾರರಿಂದ ವಸೂಲಿ ಮಾಡಲಾಗುವುದು ಎಂದರು.

ತೆರವು ಕಾರ್ಯಾಚರಣೆಯಲ್ಲಿ ಯಾವುದೇ ತಾರತಮ್ಯ ವಾಗಬಾರದು. ವೈಜ್ಞಾನಿಕವಾಗಿ ತೆರವು ಕಾರ್ಯಾಚರಣೆ ನಡೆಯಬೇಕು. ಏಕಾಏಕಿ ತೆರವು ಕಾರ್ಯಾಚರಣೆ ಪ್ರಾರಂಭಿಸಿದರೆ ಅಂಗಡಿಕಾರರಿಗೆ ತೊಂದರೆಯಾಗುತ್ತದೆ. ಕಾಲಾವಕಾಶ ನೀಡಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಅಂಗಡಿಕಾರರು ಮುಖ್ಯಾಧಿಕಾರಿಗೆ ಒತ್ತಾಯಿಸಿದರು.