ಸಂತೋಷ ಬಂಡ್ರಿಯಲಬುರ್ಗಾ: ಓಡುವ ನೀರನ್ನು ನಡೆಯುವಂತೆ ಮಾಡು, ನಡೆಯುವ ನೀರನ್ನು ನಿಲ್ಲುವಂತೆ ಮಾಡು, ನಿಂತ ನೀರನ್ನು ಇಂಗುವಂತೆ ಮಾಡು ಎನ್ನುವುದು ಅಂತರ್ಜಲದ ಮೂಲ ಉದ್ದೇಶ. ಆದರೆ, ಇದಕ್ಕೆ ವಿರುದ್ಧವಾಗಿ ಸಣ್ಣ ನೀರಾವರಿ ಇಲಾಖೆ ಕೆಲಸ ಮಾಡುತ್ತಿರುವ ಪರಿಣಾಮ ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಿದ ಚೆಕ್ ಡ್ಯಾಂಗಳಲ್ಲಿ ಹೂಳು ತುಂಬಿ ಹನಿ ನೀರೂ ನಿಲ್ಲದಂತಾಗಿದೆ.
ಯಲಬುರ್ಗಾ ತಾಲೂಕಿನ ವಣಗೇರಿ, ಮುಧೋಳ, ಸಂಗನಾಳ, ಕಲ್ಲೂರ ಹಾಗೂ ಕುಕನೂರು ತಾಲೂಕಿನ ಬೂದಗುಂಪಾ, ಬಳಿಗೇರಿ ಸೇರಿದಂತೆ ಇತರ ಹಳ್ಳಕ್ಕೆ ಅಡ್ಡಲಾಗಿ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ತುಂಬಿಕೊಂಡಿರುವ ಹೂಳು ತೆರವಿಗೆ ಸಾರ್ವಜನಿಕರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಪಶು, ಪಕ್ಷಿಗಳಿಗೆ ನೀರಿನ ಅಭಾವ ಎದುರಾಗಿದೆ. ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿದ್ದರೆ ಜಾನುವಾರುಗಳಿಗೆ, ಪಕ್ಷಿಗಳಿಗೆ ಅನುಕೂಲವಾಗುತ್ತಿತ್ತು. ಅಲ್ಲದೇ, ಹಿಂಗಾರು ಮಳೆ ಕೈಕೊಟ್ಟಾಗ ಚೆಕ್ ಡ್ಯಾಂಗಳಲ್ಲಿ ಸಂಗ್ರಹವಾಗಿರುವ ನೀರನ್ನೇ ರೈತರು ಬೆಳೆಗಳಿಗೆ ಉಪಯೋಗಿಸಲು ಸಾಧ್ಯವಾಗುತ್ತಿತ್ತು.
ಅಂತರ್ಜಲ ವೃದ್ಧಿಗೆ ಪೂರಕವಾಗುವ ಚೆಕ್‌ಡ್ಯಾಂಗಳು ದೀರ್ಘಕಾಲ ಬಳಕೆಯಾಗಬೇಕು. ಆದರೆ, ಸೂಕ್ತ ನಿರ್ವಹಣೆ ಇಲ್ಲದೇ ನಿರ್ಮಿಸಿದ ಮೂರು ವರ್ಷಗಳಲ್ಲೇ ಉದ್ದೇಶ ಕಳೆದುಕೊಂಡು ದುಸ್ಥಿತಿ ತಲುಪಿವೆ. ಜತೆಗೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಗಡಿ ಗುರುತಿಸದಿರುವುದರಿಂದ ಬಹುತೇಕ ಕೆರೆಗಳು ಒತ್ತುವರಿ ಸಮಸ್ಯೆ ಎದುರಿಸುತ್ತಿವೆ. ಕೆರೆಗಳ ದಡದ ಮೇಲೆ ಅಪಾರ ಪ್ರಮಾಣದಲ್ಲಿ ಬೆಳೆದು ನಿಂತಿರುವ ಮುಳ್ಳು ಗಿಡಗಳನ್ನು ತೆರವುಗೊಳಿಸುವುದಕ್ಕೂ ಅಧಿಕಾರಿಗಳು ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಇರುವ ಚೆಕ್ ಡ್ಯಾಂಗಳನ್ನು ನಿರ್ವಹಣೆ ಮಾಡದೇ, ಹೊಸ ಚೆಕ್‌ಡ್ಯಾಂ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಯಾಕೆ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಕೋಟ್ಯಂತರ ರೂ. ಅನುದಾನ ವ್ಯಯಿಸಿ ನಿರ್ಮಿಸ ಲಾದ ಚೆಕ್ ಡ್ಯಾಂಗಳ ವಾಸ್ತವ ಪರಿಸ್ಥಿತಿ ಹದಗೆಟ್ಟಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕನಿಷ್ಠ ಪಕ್ಷ ತಿರುಗಿಯೂ ನೋಡದಿರುವುದು ನಿರ್ಲಕ್ಷೃಕ್ಕೆ ಸಾಕ್ಷಿ ಯಾಗಿದೆ. ಇನ್ನು ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣ ಮಾಡಿದ ಚೆಕ್ ಡ್ಯಾಂಗಳು ನಮಗೇನು ಸಂಬಂಧವಿಲ್ಲದಂತೆ ಗ್ರಾಮ ಪಂಚಾಯಿತಿಗಳು ವರ್ತಿಸುತ್ತಿವೆ. ಚೆಕ್ ಡ್ಯಾಂಗಳಲ್ಲಿ ತುಂಬಿರುವ ಹೂಳು ತೆಗೆಯಲು ನರೇಗಾ ಯೋಜನೆಯಡಿ ಅವಕಾಶ ಇದ್ದರೂ ಗ್ರಾಪಂ ಅಧಿಕಾರಿಗಳು ಗಮನಿಸುತ್ತಿಲ್ಲ. ಇಲಾಖೆಗಳ ಸಮನ್ವಯತೆ ಕೊರತೆ ಇಲ್ಲಿ ಸ್ಪಷ್ಟವಾದಂತಿದೆ.
ಮಳೆಗಾಲದಲ್ಲಿ ನೀರಿನ ಪ್ರವಾಹ ಹೆಚ್ಚಳವಾಗುವುದರಿಂದ ಚೆಕ್ ಡ್ಯಾಂಗಳಲ್ಲಿ ಹೂಳು ತುಂಬುವುದು ಸಹಜ. ಪ್ರತಿವರ್ಷ ಹೂಳು ತೆರವುಗೊಳಿಸಲು ಇಲಾಖೆಯಿಂದ ಅನುದಾನ ಬಳಕೆ ಮಾಡುವುದಕ್ಕೆ ಅವಕಾಶ ಇಲ್ಲ. ಪರ್ಯಾಯವಾಗಿ ಪ್ರತಿಯೊಂದು ಚೆಕ್ ಡ್ಯಾಂಗೆ ಕಿಂಡಿಗಳನ್ನು ನಿರ್ಮಾಣ ಮಾಡಿ ಮಳೆಗಾದಲ್ಲಿ ಓಪನ್ ಮಾಡಲಾಗುತ್ತಿದೆ. ಇದರಿಂದ ತುಂಬಿಕೊಂಡ ಹೂಳು ಕೊಚ್ಚಿ ಹೋಗುತ್ತದೆ. | ಅಮೀತ್ ವಿ.ಕೆ. ಜೆಇ, ಸಣ್ಣ ನೀರಾವರಿ ಇಲಾಖೆ, ಯಲಬುರ್ಗಾ ಸಣ್ಣ ನೀರಾವರಿ ಇಲಾಖೆ ಇದ್ದರೂ ಯಾವುದೇ ಪ್ರಯೋಜನವಿಲ್ಲ. ಹೊಸ ಚೆಕ್ ಡ್ಯಾಂ ಗಳನ್ನು ನಿರ್ಮಿಸಲು ಮುಂದಾಗು ತ್ತಿದೆಯೇ ಹೊರತು ಇರುವ ಚೆಕ್ ಡ್ಯಾಂಗಳ ವೈಜ್ಞಾನಿಕ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಅಂತರ್ಜಲ ವೃದ್ಧಿಗೆ ಪೂರಕವಾಗಬೇಕಾದ ಚೆಕ್ ಡ್ಯಾಂಗಳು ಗುತ್ತಿಗೆದಾರರ ಹಿತ ಕಾಪಾಡುವುದಕ್ಕೆ ಸಹಕಾರಿಯಾಗಿವೆ. | ಶರಣಯ್ಯ ಮುಳ್ಳೂರಮಠ ರೈತ ಮುಖಂಡ ವಣಗೇರಿ