ಯಲಬುರ್ಗಾ; ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ ಪಂಚಮಸಾಲಿ ಸಮುದಾಯ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಪಂಚಮಸಾಲಿ ಪಂಚಸೇನಾ ಅಧ್ಯಕ್ಷ ರುದ್ರಗೌಡ್ರ ಸೋಲಬನಗೌಡ್ರ ಮಾತನಾಡಿ, ಹೈಕಮಾಂಡ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ನಿರ್ಧಾರ ಸರಿಯಲ್ಲ. ಅವರು ಪ್ರಾಮಾಣಿಕ, ನೇರ, ನಿಷ್ಠುರ ರಾಜಕಾರಣಿಯಾಗಿದ್ದಾರೆ. ಹೈಕಮಾಂಡ್ ನಿರ್ಧಾರ ಕೇವಲ ಪಂಚಮಸಾಲಿ ಸಮುದಾಯ ಮಾತ್ರವಲ್ಲ, ಇಡೀ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ರಾಜು ಪಲ್ಲೇದ ಮಾತನಾಡಿ, ಯತ್ನಾಳ್ ಅವರು ಅನ್ಯಾಯವನ್ನು ಪ್ರಶ್ನಿಸುವ ನಾಯಕ. ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ವಿರುದ್ಧ ಮೊದಲಿನಿಂದಲೂ ಧ್ವನಿ ಎತ್ತಿದ್ದಾರೆ. ಆದರೆ, ಅವರೆಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಮಾಜಿ ಪಪಂ ಸದಸ್ಯ ಸುರೇಶಗೌಡ ಶಿವನಗೌಡ ಮಾತನಾಡಿ, ಯತ್ನಾಳ್ ಅವರು ಬಿಜೆಪಿ ಪಕ್ಷದ ಹಿಂದುತ್ವ ಸಿದ್ಧಾಂತಕ್ಕೆ ಕಟಿಬದ್ಧರಾಗಿರುವ ರಾಜಕಾರಣಿ. ಅವರೆಂದೂ ಹಿಂದುತ್ವದ ವಿರುದ್ಧ ಹೇಳಿಕೆಗಳನ್ನು ನೀಡಿಲ್ಲ. ಹೇಳಿಕೆಗಳನ್ನು ನೀಡಿದವರನ್ನು ಬಿಟ್ಟಿಲ್ಲ. ಇಂಥ ಹಿಂದುತ್ವವಾದಿಯನ್ನು ಬಿಜೆಪಿ ಪಕ್ಷದಿಂದ ಹೊರಹಾಕಿದೆ ಎಂದರೆ ಅದು ನಂಬಲಸಾಧ್ಯ. ಅವರ ಉಚ್ಚಾಟನೆ ಹಿಂಪಡೆಯದಿದ್ದರೆ ನಾವೂ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ ಎಂದರು. ಮುಖಂಡ ಶಿವಕುಮಾರ ನಾಗನಗೌಡ್ರ ಮಾತನಾಡಿದರು.