ಯಲಬುರ್ಗಾ: ಶ್ರಾವಣ ಮಾಸದ ನಿಮಿತ್ತ ಪಟ್ಟಣದ 4ನೇ ವಾರ್ಡ್‌ನ ಶ್ರೀ ಏಳುಕೋಟಿ ಮಲ್ಲಯ್ಯಜಾತ್ರೆ ಭಾನುವಾರ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ಮಲ್ಲಯ್ಯ ದೇವರ ಕಂಚಿನ ಮೂರ್ತಿಗೆ ವಿಶೇಷ ಅಭಿಷೇಕ ಪೂಜೆ ಸಲ್ಲಿಸಲಾಯಿತು. ಬಳಿಕ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿದವು.
ಇದನ್ನು ಓದಿ: ಜಾತ್ರೆಗಳಿಗೆ ಜಾತಿ ಬೇಧಗಳಿಲ್ಲ
ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ಕುಂಭ ಕಳಸ, ಡೊಳ್ಳು ಕುಣಿತ ವಿವಿಧ ವಾದ್ಯ ಮೇಳದೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವಾಹನದ ಮೇಲೆ ಮಲ್ಲಯ್ಯ ಕಂಚಿನ ಮೂರ್ತಿ ಮೆರವಣಿಗೆ ನಡೆಸಲಾಯಿತು. ಗೊರವಪ್ಪನವರು ಮಲ್ಲಯ್ಯ ನಾಮಸ್ಮರಣೆ, ಜಯ ಘೋಷಣೆ ಮೂಲಕ ಭಕ್ತಿ ಭಾವಕ್ಕೆ ಸಾಕ್ಷಿಯಾದರು. ನಾನಾ ಕಡೆಯಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀಧರಮುರಡಿ ಹಿರೇಮಠದ ಶ್ರೀಬಸವಲಿಂಗೇಶ್ವರ ಸ್ವಾಮೀಜಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಾ ಕಾರ್ಯಕ್ರಮ ನಡೆಸಿದರು.
ಹಿರಿಯ ಮುಖಂಡ ಬಸಲಿಂಗಪ್ಪ ಭೂತೆ ಮಾತನಾಡಿ, ಶ್ರಾವಣ ಮಾಸದಲ್ಲಿ ದೇವರ ಆರಾಧನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಧರ್ಮದ ಕಾರ್ಯದಲ್ಲಿ ತೊಡಗಿಕೊಂಡಾಗ ಪುಣ್ಯ ಪ್ರಾಪ್ತಿಯಾಗಲಿದೆ. ಏಳುಕೋಟಿ ಮಲ್ಲಯ್ಯ ಜಾತ್ರೆ ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದು ಖುಷಿ ತಂದಿದೆ. ಸಾಂಪ್ರದಾಯಿಕ ಪರಂಪರೆಯನ್ನು ಭಕ್ತರು ಮುಂದುವರೆಸಿಕೊಂಡು ಹೋಗಬೇಕು ಎಂದರು.