ಜಿಲ್ಲೆ

ಜ್ಯೋತಿಗಣೇಶ್ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲಎಂದ ಬಿಎಸ್‌ವೈ

ತುಮಕೂರು: ಶಾಸಕ ಜಿ.ಬಿ.ಜ್ಯೋತಿಗಣೇಶ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಿಜಯೋತ್ಸವಕ್ಕೆ ನಾನೇ ಬರುತ್ತೇನೆ. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಜ್ಯೋತಿಗಣೇಶ್ ಪರ ಸೋಮವಾರ ಸಂಜೆ ಶೆಟ್ಟಿಹಳ್ಳಿ ಮುಖ್ಯರಸ್ತೆಯ ವಿಶಾಲಾಕ್ಷಮ್ಮ ಸಭಾಭವನದಿಂದ ಎಸ್.ಎಸ್.ಪುರಂ ಮುಖ್ಯರಸ್ತೆಯಲ್ಲಿ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದ ಬಿಎಸ್‌ವೈ, ಮೆರವಣಿಗೆಯಲ್ಲಿ ನೆರೆದಿದ್ದ ಸಹಸ್ರಾರು ಜನರನ್ನು ಉದ್ದೇಶಿಸಿ ಮಾತನಾಡಿ, ಜ್ಯೋತಿಗಣೇಶ್‌ರನ್ನು ಈ ಬಾರಿ 15-20 ಸಾವಿರ ಮುನ್ನಡೆಯಿಂದ ಗೆಲ್ಲಿಸಬೇಕು. ಅವರ ಗೆಲುವಿಗೆ ಯಾರು ಅಡ್ಡಿಪಡಿಸಲಿಕ್ಕೆ ಸಾಧ್ಯವಿಲ್ಲ. ಸ್ಮಾರ್ಟ್‌ಸಿಟಿ ಯೋಜನೆ ಅಡಿ ಅವರ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಸ್ಮಾರ್ಟ್‌ಸಿಟಿ ನಗರಕ್ಕೆ ಹಿಡಿದ ಕನ್ನಡಿ ಎಂದರು.

ಮತ್ತೊಮ್ಮೆ ಜ್ಯೋತಿಗಣೇಶ್: ರಸ್ತೆಯುದ್ದಕ್ಕು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಬಿಎಸ್‌ವೈ ಅಭಿಮಾನಿಗಳು ನಗರಕ್ಕೆ ಮತ್ತೊಮ್ಮೆ ಜ್ಯೋತಿಗಣೇಶ್ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಸಂಸದ ಜಿ.ಎಸ್.ಬಸವರಾಜು, ಹರಿಯಾಣ ಶಾಸಕಿ ಲತಿಕಾಶರ್ಮ, ಮಾಜಿ ಎಂಎಲ್ಸಿ ಡಾ.ಎಂ.ಆರ್.ಹುಲಿನಾಯ್ಕರ್, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗೇಶ್, ಪಾಲಿಕೆ ಸದಸ್ಯೆ ಮಂಜುಳಾ ಮತ್ತಿತರರು ರೋಡ್‌ಶೋನಲ್ಲಿ ಭಾಗವಹಿಸಿದ್ದರು.