ಬೆಂಗಳೂರು: ಐಎಂಎ ಬಹುಕೋಟಿ ಹಗರಣದಲ್ಲಿ 465.21 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರಾದ ರಿಜ್ವಾನ್ ಅರ್ಷದ್, ಸೌಮ್ಯಾ ರೆಡ್ಡಿ ಮತ್ತು ಯು.ಟಿ. ಖಾದರ್ ಗಮನ ಸೆಳೆಯುವ ಸೂಚನೆಯಡಿ ಕೇಳಿದ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಿರುವ ಮುಖ್ಯಮಂತ್ರಿ, ಐಎಂಎ ಮತ್ತು ಅದರ ಅಂಗಸಂಸ್ಥೆಗಳ ಆರ್ಥಿಕ ವ್ಯವಹಾರ ಅಪರಾಧಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ವಹಿಸಲು ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರನ್ನು ಸಕ್ಷಮ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದರು. ಐಎಂಎ ಪ್ರಕರಣದಲ್ಲಿ ಮೊಹಮದ್ ಮನ್ಸೂರ್ ಖಾನ್ ಮತ್ತು ಇತರ 49 ಮಂದಿ ಐಎಂಎ ಅಂಗ ಸಂಸ್ಥೆಗಳ ನಿರ್ದೇಶಕರ ಮೇಲೆ 14 ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಶೇಷ ತನಿಖಾ ದಳ ಮತ್ತು ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರ ಮಾಡಲಾಗಿದೆ. ಕಾಲ ಕಾಲಕ್ಕೆ ಹೈಕೋರ್ಟ್ಗೂ ವರದಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಐಎಂಎ ಪ್ರಕರಣದಲ್ಲಿ ಹೂಡಿಕೆದಾರರಿಗೆ ತೀವ್ರ ಅನ್ಯಾಯವಾಗಿದ್ದು, ಕೂಡಲೇ ಹಣ ಕೊಡಿಸುವ ವ್ಯವಸ್ಥೆ ಆಗಬೇಕು ಎಂದು ರಿಜ್ವಾನ್ ಮತ್ತು ಜಮೀರ್ ಖಾನ್ ಆಗ್ರಹಿಸಿದರು. 70 ಸಾವಿರಕ್ಕೂ ಹೆಚ್ಚು ಠೇವಣಿದಾರರಿಗೆ ವಂಚನೆಯಾಗಿರುವ ಬಗ್ಗೆ ಸಮಕ್ಷಮ ಅಧಿಕಾರಿಗಳು ವರದಿ ಪಡೆದುಕೊಂಡಿದ್ದಾರೆ ಎಂದು ಸಿಎಂ ಪರವಾಗಿ ಸಚಿವ ಮಾಧುಸ್ವಾಮಿ ಸದನಕ್ಕೆ ವಿವರ ನೀಡಿದರು.