ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ನಾಮಪತ್ರ ಸಲ್ಲಿಸುವ ವೇಳೆ ಖುದ್ದು ಹಾಜರಿದ್ದು ಬಿಜೆಪಿ-ಜೆಡಿಎಸ್ ಸಮನ್ವಯತೆ ಸಾಕ್ಷೀಕರಿಸಿದರು. ಕಿಲೋ ಮೀಟರ್ ಉದ್ದ ಬಿಜೆಪಿ-ಜೆಡಿಎಸ್ ಬಾವುಟ ಹಿಡಿದ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರ ‘ಮತ್ತೊಮ್ಮೆ ಮೋದಿ’ ಘೋಷಣೆ ಮುಗಿಲುಮುಟ್ಟಿತ್ತು. ರೋಡ್‌ಶೋನಲ್ಲಿ ಬಿಎಸ್‌ವೈ, ಎಚ್ಡಿಕೆ ಜೋಡೆತ್ತುಗಳು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದರು.
ಏ.1, ಶಿವಕುಮಾರ ಶ್ರೀಗಳ ಜನ್ಮದಿನದಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ವಿ.ಸೋಮಣ್ಣ ಬುಧವಾರ 3 ಸೆಟ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಿಜೆಪಿ-ಜೆಡಿಎಸ್ ಭರ್ಜರಿ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿತಲ್ಲದೆ ಉಭಯಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿದವು. ಪೊಲೀಸರೊಂದಿಗಿನ ಸಣ್ಣಪುಟ್ಟ ಮಾತಿನಚಕಮಕಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದ ಸೋಮಣ್ಣ ಮಧ್ಯಾಹ್ನ 2.11ಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಸಿಎಂಗಳಾದ ಬಿಎಸ್‌ವೈ, ಎಚ್ಡಿಕೆ, ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಜಿ.ಎಸ್.ಬಸವರಾಜು ಸಾಥ್ ನೀಡಿದರು. ಇದರ ಜತೆಯಲ್ಲಿ ಇನ್ನೆರಡು ಸೆಟ್ ನಾಮಪತ್ರಗಳನ್ನು ಸೋಮಣ್ಣ ಸಲ್ಲಿಸಿದರು.
ಮೋದಿ, ಮೋದಿ ಹರ್ಷೋದ್ಘಾರ: ನಗರದ ಬಿ.ಎಚ್.ರಸ್ತೆಯ ವಿನಾಯಕ ನಗರದ ಗಣಪತಿ ದೇವಸ್ಥಾನ (ಅರ್ಧನಾರೀಶ್ವರ)ದಲ್ಲಿ ಬೆಳಗ್ಗೆ 11ಕ್ಕೆ ಪೂಜೆ 3 ಸೆಟ್ ನಾಮಪತ್ರಗಳೊಂದಿಗೆ ಪೂಜೆಸಲ್ಲಿಸಿದ ಬಳಿಕ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಜತೆ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಜನಾರ್ದನರೆಡ್ಡಿ, ಶಾಸಕರಾದಬಿ.ಸುರೇಶಗೌಡ, ಸಿ.ಬಿ.ಸುರೇಶ್‌ಬಾಬು, ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಸೊಗಡುಶಿವಣ್ಣ, ಮಸಾಲಜಯರಾಂ, ಕೆ.ಎಂ.ತಿಮ್ಮರಾಯಪ್ಪ, ಎಂ.ವಿ.ವೀರಭದ್ರಯ್ಯ, ಎಸ್.ಡಿ.ದಿಲೀಪ್ ಕುಮಾರ್, ಕೆ.ಟಿ.ಶಾಂತಕುಮಾರ್ ಪ್ರಚಾರ ರಥವೇರಿದರು.