ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ/ಸುಬ್ರಹ್ಮಣ್ಯ:
ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ತುಲಾಭಾರ ಮತ್ತು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು.
ನಾಣ್ಯದಲ್ಲಿ ತುಲಾಭಾರ ಸೇವೆ ಸಮರ್ಪಿಸಿ 85 ಕೆ.ಜಿ. ತೂಕದ ನಾಣ್ಯವನ್ನು ಶ್ರೀ ದೇವರಿಗೆ ಅರ್ಪಿಸಿದರು. ದೇವಳದ ಅರ್ಚಕ ಸತ್ಯನಾರಾಯಣ ನೂರಿತ್ತಾಯ ವೈದಿಕ ವಿಧಿವಿಧಾನ ನೆರವೇರಿಸಿದರು. ಬಳಿಕ ದೇವರ ದರ್ಶನ ಪಡೆದರು. ಅರ್ಚಕ ರಮೇಶ್ ನೂರಿತ್ತಾಯ ಮಹಾಪ್ರಸಾದ ಮತ್ತು ಪಂಚಾಮೃತ ಮಹಾಭಿಷೇಕ ಪ್ರಸಾದ ನೀಡಿದರು.
ಬಳಿಕ ಬಿಎಸ್‌ವೈ ಹೊಸಳಿಗಮ್ಮನ ದರ್ಶನ ಪಡೆದರು. ಪುರೋಹಿತ ನಾರಾಯಣ ಭಟ್ ಪ್ರಸಾದ ನೀಡಿದರು. ನಂತರ ದೇವಳದಲ್ಲಿ ಪ್ರಸಾದ ಭೋಜನ ಸ್ವೀಕರಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮುಂಜಾನೆ ಯಡಿಯೂರಪ್ಪ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯಡಿಯೂರಪ್ಪ ಅವರನ್ನು ಗೌರವಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೊದಲಾದವರು ಇದ್ದರು.