ಜಿಲ್ಲೆ

ಯಡಿಯೂರಪ್ಪ ರೈತಪರ ಕಾಳಜಿ ಅನನ್ಯ: ಶಾಸಕ ಜ್ಯೋತಿ ಗಣೇಶ್

ತುಮಕೂರು: ರೈತರಿಗಾಗಿ ಹಾಗೂ ರೈತಪರ ಹೋರಾಟಕ್ಕೆ ಜೀವನ ಮುಡುಪಾಗಿಟ್ಟಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರದ್ದು ತಳಮಟ್ಟದಿಂದ ಮುಖ್ಯಮಂತ್ರಿ ಗಾದಿವರೆಗಿನ ಹೋರಾಟದ ಬದುಕು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಸೋಮೇಶ್ವರ ಪುರಂ ಮುಖ್ಯರಸ್ತೆಯಲ್ಲಿ ಗುರುವಾರ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಸಿಎಂ ಯಡಿಯೂರಪ್ಪ ಅವರ 77ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ, ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತಪರ ಕಾಳಜಿ ಹೊಂದಿರುವ ಯಡಿಯೂರಪ್ಪ ರೈತರಿಗಾಗಿ ವಿಶೇಷ ಕಾರ್ಯಕ್ರಮ ತಂದು ಸರ್ವರ ಏಳ್ಗೆಗೆ ಶ್ರಮಿಸಿದ ಧೀಮಂತ ನಾಯಕ ಎಂದರು.

ಹೋರಾಟದಿಂದಲೇ ಸಿಎಂ ಸ್ಥಾನಕ್ಕೇರಿರುವ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಸಂಘಟಿಸಿ, ಅಧಿಕಾರಕ್ಕೆ ತರಲು ಶ್ರಮಿಸಿದ ಅಗ್ರಗಣ್ಯ ನಾಯಕರು. ಕೇವಲ ಇಬ್ಬರು ಶಾಸಕರಾಗಿದ್ದಾಗಿನಿಂದಲೂ ಪಕ್ಷ ಸಂಘಟಿಸುವ ಮೂಲಕ ರಾಜ್ಯದ ರೈತರು ಹಾಗೂ ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ ಕೀರ್ತಿ ಯಡಿಯೂರಪ್ಪ ಅವರದ್ದು. ಅವರಿಗೆ ದೇವರು ಆರೋಗ್ಯ ಹಾಗೂ ಆಯುಷ್ಯ ನೀಡಲಿ ಎಂದು ಹಾರೈಸಿದರು.

ಯಡಿಯೂರಪ್ಪ ಅವರ ರೈತಪರ ಕಾಳಜಿಯಿಂದ ಗುಬ್ಬಿ, ತುರುವೇಕೆರೆ ಹಾಗೂ ಶೆಟ್ಟಿಹಳ್ಳಿಯ 10 ರೈತರಿಗೆ ದಿನ ನಿತ್ಯದ ಕೃಷಿಗೆ ಅಗತ್ಯವಾಗಿರುವ ವಸ್ತುಗಳನ್ನು ಸಂಘಟನೆ ವತಿಯಿಂದ ನೀಡಲಾಗಿದೆ. 100ಕ್ಕೂ ಹೆಚ್ಚು ಮಂದಿ ಈ ಸಂದರ್ಭದಲ್ಲಿ ರಕ್ತದಾನ ಮಾಡಿದ್ದಾರೆ. ಸರ್ವ ಜನಾಂಗದ ಪ್ರೀತಿಯ ನಾಯಕರಾಗಿರುವ ಬಿಎಸ್.ಯಡಿಯೂರಪ್ಪ ಅವರು ಉತ್ತಮ ಕೊಡುಗೆಗಳನ್ನು ರಾಜ್ಯಕ್ಕೆ ನೀಡುವಂತಾಗಲಿ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಚೆಂಗಾವಿ ರವಿ ಹೇಳಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅಭಿಲಾಶ್, ಜಿಲ್ಲಾ ಉಪಾಧ್ಯಕ್ಷ ಜಗದೀಶ್, ಜಿಲ್ಲಾ ಕಾರ್ಯದರ್ಶಿ ಪುಷ್ಪರಾಜ್, ಜಿಲ್ಲಾ ಸಂಚಾಲಕ ಪ್ರಸನ್ನ ಕುಮಾರ್, ನಂದನ್ ಮಹಡಿಮನೆ, ಟಿ.ಜಿ.ಶಿವದೇವ್, ಆಟೋ ಶಿವಕುಮಾರ್, ಸಿ.ಎನ್.ದಿನೇಶ್ ಕುಮಾರ್, ನಾಗೇಂದ್ರ, ವಿ.ಶ್ರೀಹರ್ಷ, ಶ್ರೀಧರ್, ಪ್ರವೀಣ್, ರಾಕೇಶ್, ಅರವಿಂದ್,ಪ್ರವೀಣ್ ಕುಮಾರ್ ಇದ್ದರು.

ಬಿಎಸ್‌ವೈ ಹುಟ್ಟುಹಬ್ಬ ವಿಶೇಷ ಆಚರಣೆ: ಶಾಲಾ ಮಕ್ಕಳಿಗೆ ಪರಿಕರಗಳು, ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನದ ಸಂಭ್ರಮದ ಕಾರ್ಯಕ್ರಮವನ್ನು ಫೆ.28ರಂದು ಬೆಳಗ್ಗೆ 11ಕ್ಕೆ ಕ್ಯಾತಸಂದ್ರದ ನಾಗರತ್ನಮ್ಮಕೆ.ಎನ್.ರುದ್ರಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸದ ಜಿ.ಎಸ್.ಬಸವರಾಜು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆವಹಿಸುವರು. ಮಾಜಿ ಶಾಸಕರಾದ ಸೊಗಡುಶಿವಣ್ಣ, ಬಿ.ಸುರೇಶಗೌಡ, ಡಾ.ಎಂ.ಆರ್.ಹುಲಿನಾಯ್ಕರ್, ಬಿಜೆಪಿ ಮುಖಂಡ ಹೆಬ್ಬಾಕ ರವಿಶಂಕರ್, ಟಿಎಂಸಿಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್, ಆಟೋಯಡಿಯೂರಪ್ಪ (ಕೆ.ಎಸ್.ಶಿವಕುಮಾರ್) ಉಪಸ್ಥಿತರಿರುವರು.