ಜಿಲ್ಲೆ

ನಿರುದ್ಯೋಗಿಗಳಾಗಿ ವರ್ಷ!

ಸುಭಾಸ ಹೆಗಡೆ ಧೂಪದಹೊಂಡ

ರಾಜೇಂದ್ರ ಶಿಂಗನಮನೆ ಶಿರಸಿ

ಮಧ್ಯಾಹ್ನ ಉಪಾಹಾರ ಯೋಜನೆಯಡಿ ರಾಜ್ಯದಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸಿದ 416 ನೌಕರರನ್ನು ಸೇವೆಯಿಂದ ಕೈಬಿಟ್ಟು ವರ್ಷ ಸಮೀಪಿಸಿದೆ. ಕೆಲಸವಿಲ್ಲದೇ ಈ ಸಿಬ್ಬಂದಿಯ ಜೀವನ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ.

2011-12ನೇ ಸಾಲಿನಿಂದ ಮಧ್ಯಾಹ್ನ ಉಪಾಹಾರ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲಾ ಪಂಚಾಯಿತಿಗಳಲ್ಲಿ 32 ಜನ ಡಾಟಾ ಎಂಟ್ರಿ ಆಪರೇಟರ್​ಗಳು, 32 ಡಿ ದರ್ಜೆ ನೌಕರರು, 176 ತಾಲೂಕು ಪಂಚಾಯಿತಿಗಳ ಸಹಾಯಕ ನಿರ್ದೇಶಕರ ಅಕ್ಷರ ದಾಸೋಹ ಕಚೇರಿಗಳಲ್ಲಿ 176 ಜನ ಡಾಟಾ ಎಂಟ್ರಿ ಆಪರೇಟರ್​ಗಳು, 176 ಡಿ ದರ್ಜೆ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ 2019-20ರವರೆಗೆ ಮುಂದುವರಿಸಲಾಗಿತ್ತು. ಆದರೆ, ಏಕಾಏಕಿ 2020-21ನೇ ಸಾಲಿನಲ್ಲಿ ಈ ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ರಾಜ್ಯ ಸರ್ಕಾರ ಕೈಬಿಟ್ಟಿತ್ತು. ಇದರಿಂದಾಗಿ ಈ ಎಲ್ಲರೂ ನಿರುದ್ಯೋಗಿಯಾಗುವ ಜತೆಗೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ.

ಕಚೇರಿ ಕಾರ್ಯಕ್ಕೆ ಹಿನ್ನಡೆ: ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದ ಪರಿಣಾಮ ಅಕ್ಷರ ದಾಸೋಹ ಕಚೇರಿಗಳಲ್ಲಿ ಕೆಲಸ- ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಬಿಸಿಯೂಟ ವಿಭಾಗದ ಮಾಹಿತಿ ಸಂಗ್ರಹಣೆ, ದಾಖಲೀಕರಣ, ಆಹಾರ ಪೂರೈಕೆ ಮಾಹಿತಿ, ಕಾಲಕಾಲಕ್ಕೆ ಸರ್ಕಾರ ಕೇಳುವ ಮಾಹಿತಿ ಒದಗಿಸುವ ಕಾರ್ಯ ನಿಧಾನಗೊಂಡಿದೆ. ಇದರಿಂದಾಗಿ ಯೋಜನೆಯ ಅನುಷ್ಠಾನದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದು ಹೆಸರು ಹೇಳಲಿಚ್ಚಿಸದ ಅಧಿಕಾರಿಯ ಅಭಿಪ್ರಾಯ.

ಜೀವನ ನಿರ್ವಹಣೆ ಸವಾಲು: ಕರೊನಾ ಕಷ್ಟಕರ ಸನ್ನಿವೇಶದಲ್ಲಿ ಕೆಲಸದಿಂದ ಕೈಬಿಟ್ಟ ಕಾರಣ ಹಲವರು ಜೀವನ ಸಾಗಿಸುವುದು ಕಷ್ಟಕರವಾಗಿ ಪರಿಣಮಿಸಿತ್ತು. ಕೆಲವರು ಕೆಲಸಕ್ಕಾಗಿ ಗುಳೆ ಹೋದರೆ ಇನ್ನು ಕೆಲವರು ಕೂಲಿ ಮಾಡುತ್ತಿದ್ದಾರೆ. ಶೇ.50ಕ್ಕೂ ಹೆಚ್ಚು ಮಂದಿ ನಿರುದ್ಯೋಗಿಯಾಗಿಯೇ ಇದ್ದಾರೆ. ಹೀಗಾಗಿ ಇವರೆಲ್ಲರ ಜೀವನ ನಡೆಸುವುದು ಸವಾಲಿನ ವಿಷಯವಾಗಿದೆ ಎಂಬುದು ಹೊರಗುತ್ತಿಗೆಯಿಂದ ಹೊರಗಿರುವ ಶೋಭಾ ಪೂಜಾರಿ, ನಾರಾಯಣ ಮುಕ್ರಿ ಹಾಗೂ ಇತರರ ಮಾತಾಗಿದೆ.

ಪ್ರತಿ ವರ್ಷ ನವೀಕರಣ ಪತ್ರ ನೀಡಿ ನೌಕರಿಯಲ್ಲಿ ಮುಂದುವರಿಸಲಾಗಿತ್ತು. ಆದರೆ, 2020ರ ಏಪ್ರಿಲ್​ನಲ್ಲಿ ಸೇವೆಯಿಂದ ಕೈಬಿಡಲಾಗಿತ್ತು. ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಬಹುತೇಕ ನೌಕರರು ನಿರುದ್ಯೋಗಿಗಳಾದರೆ, ಕೆಲವರು ಅನಿವಾರ್ಯವಾಗಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತಕ್ಷಣ ರಾಜ್ಯ ಸರ್ಕಾರ ಈ ಸಿಬ್ಬಂದಿಯನ್ನು ಮರು ನೇಮಿಸಿ ಆದೇಶ ಹೊರಡಿಸಬೇಕು. | ವಿನಾಯಕ ನಾಯ್ಕ, ಹೊರಗುತ್ತಿಗೆ ಸಿಬ್ಬಂದಿಈ ಎಲ್ಲ ಹುದ್ದೆಗಳು ತಾತ್ಕಾಲಿಕ ಹುದ್ದೆಗಳಾಗಿದ್ದು, ಇವರನ್ನು ಸೇವೆಯಿಂದ ಕೈಬಿಡುವಂತೆ ಆಯಾ ಜಿಲ್ಲಾ ವ್ಯಾಪ್ತಿಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರವೇ ಸೂಚಿಸಿತ್ತು. ಆ ಪ್ರಕಾರ ಸೇವೆಯಿಂದ ಕೈಬಿಡಲಾಗಿದೆ. ಈ ಸಿಬ್ಬಂದಿಯನ್ನು ಪುನಃ ತೆಗೆದುಕೊಳ್ಳುವುದು ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ.| ಪ್ರಿಯಾಂಗ ಎಂ., ಉತ್ತರ ಕನ್ನಡ ಜಿಪಂ ಸಿಇಒ