ಜಿಲ್ಲೆ

ಶಬರಿ ಆಶ್ರಮಕ್ಕೆ ಶ್ರೀರಾಮ ಯಾತ್ರೆ

ಡಿ.ವಿ. ಕಮ್ಮಾರ

ಬೆಳಗಾವಿ: ಶ್ರೀರಾಮನ ವನವಾಸ, ಲಂಕೆ ಪಯಣ ಮತ್ತು ಅಯೋಧ್ಯೆಗೆ ಹಿಂದಿರುಗಿದ ಕುರುಹುಗಳ ಮಾರ್ಗದಲ್ಲಿ ಸಾಗುವ ಶ್ರೀರಾಮ ಯಾತ್ರೆಯು ಶನಿವಾರ ಚಿತ್ರಕೂಟದಿಂದ ಆರಂಭಗೊಂಡಿದ್ದು, ಅ.28ರಿಂದ 30ರವರೆಗೆ ಮೂರು ದಿನ ಕರ್ನಾಟಕದಲ್ಲಿ ಸಂಚರಿಸಲಿದೆ.

ಸಂತಕೃಪಾ ಸನಾತನ ಸಂಸ್ಥಾನ ಆಯೋಜಿಸಿರುವ ಈ ರಾಮ ಯಾತ್ರೆ ಮೊರಾರಿ ಬಾಪು ನೇತೃತ್ವದಲ್ಲಿ ಹೊರಟಿದೆ. ಒಟ್ಟು 411 ಭಕ್ತರಿಗಾಗಿ 22 ಬೋಗಿಗಳ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಯಾತ್ರೆ ಮಧ್ಯೆ ಒಟ್ಟು 9 ಸ್ಥಗಳಲ್ಲಿ ರಾಮಕಥಾ ಪಠಣ ಆಯೋಜಿಸಲಾಗಿದೆ. ಭಾರತ ಮತ್ತು ಶ್ರೀಲಂಕಾದಾದ್ಯಂತ ಒಟ್ಟು 8000 ಕಿಮೀವರೆಗಿನ ದೂರವನ್ನು 11 ದಿನಗಳಲ್ಲಿ ಕ್ರಮಿಸಲಿದ್ದಾರೆ.

ನಾಡದ್ದು ಕರ್ನಾಟಕ ಪ್ರವೇಶ:

ಅ.28ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನದಲ್ಲಿನ ಶಬರಿ ಆಶ್ರಮಕ್ಕೆ ಬೆಳಗ್ಗೆ 10 ಗಂಟೆಗೆ ಯಾತ್ರೆ ಭೇಟಿ ನೀಡಲಿದೆ. ಇಲ್ಲಿ ಮೊರಾರಿ ಬಾಪುರಿಂದ ರಾಮಕಥಾ ಪ್ರಸ್ತುತಗೊಳ್ಳಲಿದೆ. ಬಳಿಕ ಅ.29ರಂದು ಹಂಪಿಯ ಋಷ್ಯಮೂಕ ಪರ್ವತ, 30ರಂದು ಶ್ರವಣ ಪರ್ವಕ್ಕೆ ಭೇಟಿ ನೀಡುವರು.

ಕರ್ನಾಟಕದ ಹೊರತಾಗಿ ಈ ಯಾತ್ರೆಯು ಅಗಸ್ತ್ಯ ಮುನಿ ಆಶ್ರಮ ಸತ್ನಾ, ಪಂಚವಟಿ, ತಮಿಳುನಾಡಿನ ರಾಮೇಶ್ವರಂ, ಶ್ರೀಲಂಕಾದ ಕೊಲಂಬೋಗೆ ಭೇಟಿ ನೀಡಿ ಕೊನೆಯದಾಗಿ ಅಯೋಧ್ಯೆಯಲ್ಲಿ ಸಮಾರೋಪಗೊಳ್ಳಲಿದೆ. 2021ರಲ್ಲಿ ಇದೇ ರೀತಿ ಅಯೋಧ್ಯೆಯಿಂದ ಚಿತ್ರಕೂಟ ಮತ್ತು ನಂದಿಗ್ರಾಮಕ್ಕೆ ಯಾತ್ರೆ ನಡೆಸಲಾಗಿತ್ತು. ಅದಾದ ಬಳಿಕ ಎರಡನೇ ಯಾತ್ರೆ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ.