ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸನಗೌಡ ಪಾಟೀಲ ಯತ್ನಾಳ ಸೇರಿ ಇತರರು ಗೌಪ್ಯ ಸಭೆ ನಡೆಸದೆ ಬಹಿರಂಗವಾಗಿಯೇ ಮಾಡಿದ್ದಾರೆ. ಅವರ ವಿಷಯದಲ್ಲಿ ಕೆಲ ವಿಚಾರಗಳನ್ನು ಪಕ್ಷದೊಳಗೆ ಚರ್ಚೆ ಮಾಡಬೇಕಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಕುಳಿತು ಎಲ್ಲರೂ ಮಾತನಾಡುವ ಅಗತ್ಯವಿದೆ. ಅದನ್ನು ಮಾದ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ. ಒಂದು ಪಕ್ಷ ಎಂದಾಗ ಬೇರೆ ಬೇರೆ ವಿಚಾರಗಳು ಇರುತ್ತವೆ. ಅವರು ಹೇಳುವ ಕೆಲ ವಿಚಾರಗಳು ಸರಿ ಇವೆ. ಅವುಗಳ ಬಗ್ಗೆ ಪಕ್ಷದೊಳಗೆ ಚರ್ಚೆ ಆಗಬೇಕಿದೆ. ಬಿಜೆಪಿಯಲ್ಲಿ ಭಿನ್ನಮತ ಇಲ್ಲ. ಕಾಂಗ್ರೆಸ್ನಲ್ಲೂ ಅಸಮಾಧಾನ ಇದ್ದೇ ಇದೆ. ಒಂದೊಂದು ದಿನ ಒಬ್ಬೊಬ್ಬರು ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಇದು ಎಲ್ಲ ಪಕ್ಷಗಳಲ್ಲಿ ಇದ್ದದ್ದೆ ಎಂದರು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ ಅವರು ಸ್ಪಷ್ಟನೆ ಕೇಳದೆ ಕ್ರಮಕ್ಕೆ ಮುಂದಾಗಿದ್ದರು. ಆದರೆ ಈಗಿನ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಸ್ಪಷ್ಟನೆಗೆ ಅವಕಾಶ ಕೊಟ್ಟಿದ್ದಾರೆ. ಸ್ಪಷ್ಟನೆ ಸಮರ್ಪಕವಾಗಿದ್ದರೆ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ಅಸಮರ್ಪಕ ಇದ್ದಾಗ ಮಾತ್ರ ಮುಂದಿನ ಕ್ರಮ ಆಗುತ್ತದೆ ಎಂದರು.
ರಕ್ಷಣೆ ನೀಡಲಿ: ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ವಿಚಾರ ಆತಂಕಕ್ಕೀಡು ಮಾಡಿದೆ. ಇಸ್ಮಾಯಿಲ್ ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕು. ಈ ಕುರಿತು ನಾನೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡುತ್ತೇನೆ. ಶಾಂತಿ ಪ್ರಿಯರ ನಗರದಲ್ಲಿ ಈ ರೀತಿಯ ಬೆಳವಣಿಗೆ ನಡೆಯುತ್ತಿರುವ ಕುರಿತು ಗಂಭೀರ ವಿಚಾರ ಮಾಡಬೇಕಾಗುತ್ತದೆ. ಯಾವುದೇ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಯಾವುದೇ ಪಕ್ಷ ಇದ್ದರೂ ಅವರಿಗೆ ರಕ್ಷಣೆ ನೀಡಬೇಕು. ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ಗಂಭೀರ ವಿಚಾರ. ಡ್ರಗ್ಸ್ ವಿರುದ್ಧ ಕ್ರಮ ಜರುಗಿಸುತ್ತಿದ್ದಾರೆ. ಅದರ ಜತೆಗೆ ಡ್ರಗ್ ಪೆಡ್ಲರ್ಗಳನ್ನೂ ಬಂಧಿಸುವ ಕೆಲಸವಾಗಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.