ಮಂಗಳೂರು: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಮೇಳದ ಪ್ರಧಾನ ಭಾಗವತ ಸುಬ್ರಹ್ಮಣ್ಯ ಆಚಾರ್ಯ(43) ಮಂಗಳವಾರ ನಗರದ ಕುಲಶೇಖರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಲಶೇಖರದಲ್ಲಿರುವ ಯಕ್ಷಗಾನ ಕಲಾವಿದ ಸಂತೋಷ್ ಎಂಬುವರ ಮನೆ ಆವರಣದಲ್ಲಿ ಸುಬ್ರಹ್ಮಣ್ಯ ಆಚಾರ್ಯ ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನ 2.30ಕ್ಕೆ ಮೃತಪಟ್ಟಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ನಿವಾಸಿ ಸುಬ್ರಹ್ಮಣ್ಯ ಆಚಾರ್ಯ, ಹಲವು ವರ್ಷಗಳಿಂದ ಮಂದಾರ್ತಿ ಒಂದನೇ ಮೇಳದ ಭಾಗವತರಾಗಿ ಬಡಗು ಶೈಲಿಯಲ್ಲಿ ವಿಶೇಷ ಛಾಪು ಮೂಡಿಸಿದ್ದರು. ಉಡುಪಿ ಸಮೀಪದ ಸಂತೆಕಟ್ಟೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಸ್ತ್ರೀ ವೇಷಧಾರಿ ಸಂತೋಷ್ ಕುಲಶೇಖರ ಕೂಡ ಹಿಂದೆ ಮಂದಾರ್ತಿ ಮೇಳದಲ್ಲಿ ಕಲಾವಿದರಾಗಿದ್ದರು. ಆಗಿನಿಂದಲೂ ಇಬ್ಬರೂ ಸ್ನೇಹಿತರಾಗಿದ್ದರು. ಬಳಿಕ ಅವರು ಮಂದಾರ್ತಿ ಮೇಳ ತೊರೆದು ಸಸಿಹಿತ್ಲು ಯಕ್ಷಗಾನ ಮೇಳ ಸೇರಿದ್ದರು. ಆ ಬಳಿಕವೂ ಇಬ್ಬರೂ ಒಟ್ಟಾಗಿ ನಡುಮನೆ ಎಂಬ ಯಕ್ಷಗಾನ ಕಾರ್ಯಕ್ರಮವನ್ನು ಅಲ್ಲಲ್ಲಿ ಆಯೋಜಿಸುತ್ತಿದ್ದರು.
ಮಾರಣಕಟ್ಟೆ ಸಮೀಪದ ಮೇಲ್ ಹೊಸೂರಿನಲ್ಲಿ ಸೋಮವಾರ ರಾತ್ರಿ ನಡೆದ ಮಂದಾರ್ತಿ ಮತ್ತು ಮಾರಣಕಟ್ಟೆ ಮೇಳಗಳ ಕೂಡಾಟದಲ್ಲಿ ಸುಬ್ರಹ್ಮಣ್ಯ ಆಚಾರ್ಯ ಭಾಗವತಿಕೆ ನಡೆಸಿದ್ದರು. ಮಂಗಳವಾರ ಬೆಳಗ್ಗೆ ಮಂಗಳೂರಿಗೆ ಬಂದು ಸಂತೋಷ್ ಮನೆಯ ಬಳಿ ಹೋಗಿದ್ದರು. ಅಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
‘ಪತಿ ಅತಿಯಾಗಿ ಮದ್ಯ ಸೇವಿಸುತ್ತಿದ್ದರು ಮತ್ತು ಹೆಚ್ಚು ಸಾಲ ಮಾಡಿಕೊಂಡಿದ್ದರು. ಸಾಲಗಾರರು ಹಣ ಕೇಳಿದಾಗ ಒತ್ತಡಕ್ಕೊಳಗಾಗುತ್ತಿದ್ದರು’ ಎಂದು ಮೃತರ ಪತ್ನಿ ಕದ್ರಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂಗೀತದಲ್ಲೂ ಪಾಂಡಿತ್ಯ: ಬಡಗುತಿಟ್ಟಿನ ರಾಗಜ್ಞಾನದಲ್ಲಿ ಪ್ರಭುತ್ವ ಸಾಧಿಸಿದ್ದಲ್ಲದೆ, ಸಂಗೀತವನ್ನೂ ಅಭ್ಯಾಸ ಮಾಡಿಕೊಂಡಿದ್ದ ಭಾಗವತರು, ಭಜನೆ, ಕೀರ್ತನೆಗಳನ್ನು ಹಾಡಿ ಜನರ ಮನಸೂರೆಗೊಂಡಿದ್ದರು. ಅಷ್ಟೊಂದು ರಾಗಶುದ್ಧಿ ಅವರಲ್ಲಿತ್ತು ಎಂದು ಯಕ್ಷಗಾನ ಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ಹಾಡುತ್ತಿದ್ದುದಲ್ಲದೆ, ಹಳೇ- ಹೊಸ ಪ್ರಸಂಗಗಳಲ್ಲಿ ಪ್ರಭುತ್ವ ಸಾಧಿಸಿದ್ದ ಅಪೂರ್ವ ಕಲಾವಿದರಾಗಿದ್ದರು. ವಾಸಂತಿ, ಕಲಾವತಿ, ಮಾಂಡ್, ಚಂದ್ರಕಂಸ್, ರೇವತಿ, ಇಂದೋಳಿ, ಅಮೃತವರ್ಷಿಣಿ ರಾಗಗಳಲ್ಲಿ ಅವರು ಹಾಡುತ್ತಿದ್ದರೆಂದರೆ ಪ್ರೇಕ್ಷಕರು ಮೈಮರೆಯುತ್ತಿದ್ದರು.
ಏರು ಕಂಠದ ಭಾಗವತ: ಸುಬ್ರಹ್ಮಣ್ಯ ಆಚಾರ್ ಏರುಕಂಠದ ಭಾಗವತ. ಯಾವುದೇ ಶೃತಿ ಸಮಸ್ಯೆ ಅವರಿಗೆ ಕಾಡಿದ್ದೇ ಇಲ್ಲ. ತಾರಕ ಶೃತಿಯಲ್ಲೂ ಹಾಡುವ ಸಾಮರ್ಥ್ಯವನ್ನು ಅವರು ಹೊಂದಿದ್ದು ವಿಶೇಷವಾಗಿತ್ತು. ಉಡುಪಿ- ಕುಂದಾಪುರ ಭಾಗಗಳಲ್ಲಿನ ವಿಶಿಷ್ಟ ನಡುತಿಟ್ಟು ಯಕ್ಷಗಾನದ ಪ್ರತಿನಿಧಿಯಂತಿದ್ದರು. ನಡುತಿಟ್ಟಿನ ಕುಂಜಾಲುಶೈಲಿ ಭಾಗವತಿಕೆಯಲ್ಲಿ ಇವರನ್ನು ಮೀರಿಸುವವರೇ ಇರಲಿಲ್ಲ. ನಡುತಿಟ್ಟು ಶೈಲಿಯನ್ನು ಭಾಗವತಿಕೆಯಲ್ಲಿ ಅಳವಡಿಸಿಕೊಂಡು ಮೋಡಿ ಮಾಡುತ್ತಿದ್ದರು. ಯಕ್ಷಗಾನದ ಧನಾತ್ಮಕ ಪ್ರಯೋಗಗಳಿಗೆ ಅವರು ತಮ್ಮನ್ನು ಒಡ್ಡಿಕೊಳ್ಳುತ್ತಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ. ಕಳೆದೊಂದು ದಶಕಕ್ಕೂ ಹೆಚ್ಚು ಕಾಲದಿಂದ ಮಂದಾರ್ತಿ ಮೇಳದಲ್ಲಿ ಭಾಗವತಿಕೆ ನಡೆಸುತ್ತಿದ್ದರು.