ಜಿಲ್ಲೆ

ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಿ...

ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸೂಚನೆ

ಮಳೆ ಹಾನಿ ಪ್ರದೇಶಕ್ಕೆ ಭೇಟಿ, ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜನರಿಗೆ ತೀವ್ರ ತೊಂದರೆಯಾಗಿದ್ದು, ತಗ್ಗು ಪ್ರದೇಶದ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. ಪ್ರತಿ ವರ್ಷವೂ ಮಳೆಗಾಲ ಆರಂಭವಾಗುತ್ತಿದ್ದಂತೆ ಇದೇ ಸಮಸ್ಯೆ ಪುನರಾವರ್ತನೆ ಆಗುತ್ತಿದ್ದು, ಕೆಲವರು ಅತಿಕ್ರಮ ಮಾಡಿಕೊಂಡಿರುವ ರಾಜಕಾಲುವೆ ಅಥವಾ ಪ್ರಮುಖ ತೋಡುಗಳನ್ನು ಯಾವುದೇ ಮುಲಾಜಿಲ್ಲದೆ ಅಧಿಕಾರಿಗಳು ತೆರವು ಮಾಡಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಸೂಚಿಸಿದ್ದಾರೆ.

ಉಡುಪಿ-ಮಣಿಪಾಲ ರಸ್ತೆ ಮಾರ್ಗದ ಲಕ್ಷ್ಮೀಂದ್ರ ನಗರದಲ್ಲಿ ಹಾನಿಗೊಂಡ ಪ್ರದೇಶಕ್ಕೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿ, ಮಾತನಾಡಿದರು.

ನಗರಸಭೆ ವ್ಯಾಪ್ತಿಯಲ್ಲಿರುವ ಚರಂಡಿ, ತೋಡು ಹಾಗೂ ಸರ್ಕಾರಿ ರಾಜಕಾಲುವೆಗಳಲ್ಲಿ ತುಂಬಿದ್ದ ಹೂಳು, ಗಿಡ-ಗಂಟಿ ತೆರವು ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ.50 ಕಾಮಗಾರಿ ಮುಗಿದಿದೆ. ಆದರೆ, ವಾಯುಭಾರ ಕುಸಿತದಿಂದ ದಿಢೀರ್​ ಆಗಿ ಭಾರಿ ಪ್ರಮಾಣದಲ್ಲಿ ಮಳೆ ಬಂದ ಹಿನ್ನೆಲೆಯಲ್ಲಿ ತೋಡುಗಳಲ್ಲಿ ಸರಾಗವಾಗಿ ಮಳೆ ನೀರು ಹರಿಯಲು ಸಾಧ್ಯವಾಗದೆ ಸಮೀಪದ ರಸ್ತೆಯ ಮೇಲೆ ಹರಿಯುವಂತಾಗಿದೆ. ಬಾಕಿ ಇರುವ ತೋಡು ಹಾಗೂ ರಾಜಕಾಲುವೆಗಳಲ್ಲಿ ಕೂಡಲೇ ಹೂಳು ತೆರವು ಮಾಡುವಂತೆ ಸೂಚಿಸಿದ್ದೇನೆ ಎಂದು ಶಾಸಕ ಸುವರ್ಣ ತಿಳಿಸಿದರು.